ಹುಣಸೂರು ತಾಲೂಕು ಮಾದಯ್ಯನಕಟ್ಟೆ ಹಾಡಿಗೆ ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್ ನೇತೃತ್ವದ ತಂಡ ಭೇಟಿ ನೀಡಿ, ಗಿರಿಜನರಿಂದ ಸಮಸ್ಯೆ ಕುರಿತು ಮಾಹಿತಿ ಕಲೆ ಹಾಕಿದರು. ಗ್ರಾಪಂ ಕಾರ್ಯದರ್ಶಿ ಗೀತಾ, ಸೆಸ್ಕ್ ಜೆಇ ದೊರೆರಾಜು ಇತರರಿದ್ದರು 
ಮೈಸೂರು

ಮಾದಯ್ಯನಕಟ್ಟೆಗೆ ಅಧಿಕಾರಿಗಳ ದಂಡು

ಹುಣಸೂರು : ಮೂರು ವರ್ಷಗಳಿಂದ ವಿದ್ಯುತ್ ಕಾಣದ ತಾಲೂಕಿನ ಮಾದಯ್ಯನಕಟ್ಟೆ ಹಾಡಿಗೆ ದೌಡಾಯಿಸಿದ ಅಧಿಕಾರಿಗಳ ತಂಡ... ಕರೆಂಟ್ ಯಾಕೆ ಕಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದ ಗಿರಿಜನರಿಗೆ ಎರಡೇ ದಿನದಲ್ಲಿ ಸಂಪರ್ಕ ನೀಡುತ್ತೇವೆ ಎನ್ನುವ ಭರವಸೆ... ರೇಷನ್ ಕಾರ್ಡ್, ಆಧಾರ್ ಕಾರ್ಡ್ ನೀಡಲು ಆಗ್ರಹಿಸಿದ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅಧಿಕಾರಿಗಳು...
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ಏ.29ರ ಸಂಚಿಕೆಯಲ್ಲಿ ‘ಕತ್ತಲಿನಲ್ಲಿ ಹಾಡಿ ಜನರ ಬಾಳು’ ಶೀರ್ಷಿಕೆಯಡಿ ಫೋಕಸ್ ಸ್ಟೋರಿ ಕಾಲಂ ವಿಶೇಷ ವರದಿ ತಾಲೂಕು ಆಡಳಿತದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವರದಿಯ ಗಂಭೀರತೆ ಅರಿತ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್ ಮತ್ತವರ ತಂಡ ಗುರುವಾರ ಹಾಡಿಗೆ ಭೇಟಿ ನೀಡಿತು.
ಈ ವೇಳೆ ಹಾಡಿಯ 25ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಕಂಡು ದಂಗಾದರು. ಹಾಡಿಯ ಮುಖಂಡರಾದ ರಾಜು, ಯುವಕ ಮಣಿ ಮಾತನಾಡಿ, ಮೂರು ವರ್ಷದಿಂದ ನಾವು ಇಲ್ಲಿ ಹೇಗೆ ವಾಸಿಸುತ್ತಿದ್ದೇವೆ ಎನ್ನುವುದು ನಿಮಗೆ ತಿಳಿದಿಲ್ಲ. ಗ್ರಾಪಂನವರಿಗೆ ಸಾರಿ ಸಾರಿ ಹೇಳಿದರೂ ಕಿವಿಗೆ ಹಾಕಿಕೊಂಡಿಲ್ಲ. ಒಂದು ಬಾರಿ ಗಿರಿಜನ ಕಲ್ಯಾಣ ಇಲಾಖೆ ಬಿಲ್ ಬಾಕಿ ಕಟ್ಟಿದ್ದು ನಿಜ. ತದನಂತರ ವಿದ್ಯುತ್ ಫ್ರೀ ಎಂದು ಸರ್ಕಾರ ತಿಳಿಸಿದ ಮೇಲೆ ಗ್ರಾಪಂನವರು ಬಂದು ನಮ್ಮನ್ನೂ ಗೃಹಲಕ್ಷ್ಮಿ ಯೋಜನೆ ಅಥವಾ ಇನ್ಯಾವುದೇ ಯೋಜನೆಯಡಿ ಒಳಪಡಿಸುವ ಕಾರ್ಯ ಮಾಡಲಿಲ್ಲ ಯಾಕೆ? ಗಿರಿಜನರೆಂದರೆ ಅಷ್ಟು ನಿರ್ಲಕ್ಷ್ಯ ಏಕೆ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿದ್ದ ಕರೀಮುದ್ದನಹಳ್ಳಿ ಗ್ರಾಪಂ ಕಾರ್ಯದರ್ಶಿ ಗೀತಾ ಅವರಿಗೆ ಈ ಕುರಿತು ಕ್ರಮ ವಹಿಸಲು ಗಿರಿಜನ ಕಲ್ಯಾಣಾಧಿಕಾರಿ ಸೂಚಿಸಿದರು. ಅಲ್ಲದೆ ಸೆಸ್ಕ್ ಬಿಳಿಕೆರೆ ವಿಭಾಗದ ಜೆಇ ದೊರೆರಾಜು ಅವರಿಗೆ ಇನ್ನೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ತಾಕೀತು ಮಾಡಿದರು.
32 ಜನರಿಗೆ ರೇಷನ್ ಕಾರ್ಡ್ ಇಲ್ಲ: ನಿವಾಸಿ ಜಯಮ್ಮ, ಪವಿತ್ರಾ ಮಾತನಾಡಿ, ಹಾಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ. 15ಕ್ಕೂ ಹೆಚ್ಚು ಜನರಿಗೆ ಆಧಾರ ಕಾರ್ಡ್ ಇಲ್ಲ. ಕುಟುಂಬಗಳು ಬೆಳೆದಿದ್ದು, ಹೊಸ ಕುಟುಂಬಕ್ಕೆ ಮನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದಾಗ, ಗಿರಿಜನ ಕಲ್ಯಾಣ ಇಲಾಖೆಯಿಂದ ಸತತವಾಗಿ ಹಾಡಿಗಳಿಗೆ ಬಂದು ಆಧಾರ್ ಕಾರ್ಡ್ ಡ್ರೈವ್ ಮಾಡಲಾಗುತ್ತಿದೆ. ಮಾದಯ್ಯನಕಟ್ಟೆ ಹಾಡಿಯಲ್ಲಿ ಬಾಕಿ ಇರುವ ಜನರಿಗೆ ಶೀಘ್ರ ಆಧಾರ್ ಕಾರ್ಡ್ ನೀಡಲಾಗುವುದು. ಹೊಸದಾಗಿ ರೇಷನ್ ಕಾರ್ಡ್ ನೀಡುವ ವ್ಯವಸ್ಥೆಯನ್ನು ಸರ್ಕಾರ ಶೀಘ್ರ ಆನ್‌ಲೈನ್ ಮೂಲಕ ಜಾರಿಗೊಳಿಸಲಿದೆ. ಹಾಡಿಯ ಎಲ್ಲ ಕುಟುಂಬಕ್ಕೂ ರೇಷನ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.