ಮೈಸೂರು ಜಿಲ್ಲೆಯ ವಿವಿಧೆಡೆ ನಡೆದ ಮನೆ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣ.
ಮೈಸೂರು: ಮನೆಗೆ ಬೀಗ ಹಾಕಿ ಕೀಲಿಕೈಯನ್ನು ಮನೆಯ ಬಳಿಯಲ್ಲಿಯೇ ಇಟ್ಟು ಹೋಗುತ್ತಿದ್ದವರ ಮನೆಗಳಲ್ಲಿ ಕಳವು ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬನನ್ನು ಜಿಲ್ಲೆಯ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಬರೋಬ್ಬರಿ ಒಟ್ಟು ಅರ್ಧ ಕೆ.ಜಿ.ಯಷ್ಟು ಚಿನ್ನಾಭರಣ ಕಳವು ಮಾಡಿದ್ದ.
ಹಾಸನದ ಆಲೂರು ತಾಲೂಕಿನ ಮುದಿಗೆರೆ ನಿವಾಸಿ ಎಂ.ವಿ. ರಂಗೇಗೌಡ ಬಂಧಿತ ಆರೋಪಿ. ಮನೆಗೆ ಬೀಗ ಹಾಕಿ ಕೀಲಿಕೈಯನ್ನು ಹೂವಿನ ಕುಂಡ, ಚಪ್ಪಲಿ ಸ್ಟಾೃಂಡ್ ಮುಂತಾದ ಕಡೆಗಳಲ್ಲಿ ಇಟ್ಟು ಹೋಗುತ್ತಿದ್ದವರ ಮನೆಗಳೇ ಈತನ ಟಾರ್ಗೆಟ್.
ಆರೋಪಿಯು ಮನೆಯ ಬಳಿಯಲ್ಲಿ ಕೀಲಿಕೈಯನ್ನು ಹುಡುಕಿ ಅದೇ ಕೀಲಿಕೈನಿಂದ ಬಾಗಿಲು ತೆರೆದು ನಂತರ ಮನೆಯೊಳಗೆ ಬೀರುವಿನ ಕೀಲಿಕೈಯನ್ನು ಪತ್ತೆ ಹಚ್ಚಿ ಕಳವು ಮಾಡುತ್ತಿದ್ದ. ಈತ ಎಲ್ಲಿಯೂ ಸಹ ಮನೆಯ ಬಾಗಿಲು ಹಾಗೂ ಬೀರುವನ್ನು ಮುರಿದಿರಲಿಲ್ಲ. ಆರೋಪಿಯು ಪೆಟ್ರೋಲ್ ಬಂಕ್‌ವೊಂದರಲ್ಲಿ ಪೆಟ್ರೋಲ್ ಹಾಕಿಸಲು ತೆರಳಿದ ಸಂದರ್ಭ ಆತನ ಬೈಕ್ ಸಿಸಿ ಕ್ಯಾಮರಾದಲ್ಲಿ ಸೆರೆ ಆಯಿತು. ಆದರೆ, ನಂಬರ್ ಪ್ಲೇಟ್ ಮಸುಕಾಗಿತ್ತು. ನಂತರ ಪೊಲೀಸರು ಮಸುಕಾದ ಅಂಕಿಅಂಶಗಳು ಹಾಗೂ ಅಕ್ಷರಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಆರೋಪಿಯ ಬೈಕ್‌ನ ನಂಬರ್ ಪ್ಲೇಟ್‌ನಲ್ಲಿರುವ ಅಕ್ಷರ ಹಾಗೂ ಸಂಖ್ಯೆಗಳನ್ನು ತಿಳಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಕಳವು ಮಾಡಿದ ಚಿನ್ನವನ್ನು ಹಾಸನ ನಗರದ ದೊಡ್ಡಗರಡಿ ಬೀದಿಯಲ್ಲಿ ಚಿನ್ನ, ಬೆಳ್ಳಿ ಕೆಲಸ ಮಾಡುವ ಮೂರ‌್ನಾಲ್ಕು ಜನರಿಗೆ ನೀಡಿ ಹಣ ಪಡೆದುಕೊಂಡಿದ್ದ. ಈತ ಮೇಲೆ ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಈತನ ಬಂಧನದೊಂದಿಗೆ ಜಯಪುರ, ಹುಣಸೂರು ಗ್ರಾಮಾಂತರ ಠಾಣೆಯ ತಲಾ 2, ಇಲವಾಲ, ಮೈಸೂರು ದಕ್ಷಿಣ, ಬನ್ನೂರು, ಸಾಲಿಗ್ರಾಮ ಠಾಣೆಯ ತಲಾ 1 ಪ್ರಕರಣಗಳು ಪತ್ತೆಯಾಗಿದೆ. ಆರೋಪಿಯಿಂದ 65.20 ಲಕ್ಷ ರೂ. ಮೌಲ್ಯದ 498 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಮಲ್ಲಿಕ್, ಎಲ್. ನಾಗೇಶ್, ಡಿಎಸ್‌ಪಿ ರಾಜಣ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಡಿ.ಬಿ. ಜಯಪ್ರಕಾಶ್, ಪಿಐ ಪ್ರಕಾಶ್ ಎತ್ತಿನಮನಿ, ಎಚ್‌ಸಿಗಳಾದ ಪಚ್ಚೇಗೌಡ, ಕೆ.ಎಸ್. ಆನಂದ, ಜಿ.ಎಸ್. ರವಿ, ಕೆ.ಬಿ. ಗಿರೀಶ್ ಕುಮಾರ್, ಎಂ.ಯು. ದಿಲೀಪ್, ಅರುಣೇಶ್, ಮಹದೇವಸ್ವಾಮಿ, ಪಿಸಿಗಳಾದ ಎಂ. ಹರೀಶ, ನಿಂಗಣ್ಣ ಶರಣಪ್ಪ, ಕೆ.ಆರ್. ರಾಜೇಂದ್ರ ಪಾಲ್ಗೊಂಡಿದ್ದರು.