ಹುಣಸೂರು ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿಇಒ ಎಸ್.ಪಿ.ಮಹದೇವ, ಡಾ.ಕೆ.ಪಿ.ಪ್ರಸನ್ನ, ಹೊಸೂರು ಕುಮಾರ್. ಎಚ್.ಕೆ.ಮಹದೇವ ಇತರರಿದ್ದರು.
ಹುಣಸೂರು: ರಾಷ್ಟ್ರಕವಿ ಕುವೆಂಪು ಸಾಹಿತ್ಯವು ಮನುಕುಲದ ಬದುಕನ್ನು ಕಟ್ಟಿಕೊಡುವ ದಾರಿದೀಪಗಳು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪಿ.ಪ್ರಸನ್ನ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ತಮ್ಮ ವಿಚಾರಗಳ ಮುಖೇನ ಕನ್ನಡ ನಾಡಿನ ಯುಗ ಪ್ರಜ್ಞೆಯನ್ನು ವಿಸ್ತರಿಸಿದರು. ಅವರ ವೈಚಾರಿಕ ಆಲೋಚನೆಗಳು ಕೇವಲ ಸಾಹಿತ್ಯದ ಸರಕುಗಳಲ್ಲ. ಬದಲಿಗೆ ಅವು ಮನುಕುಲದ ಬದುಕನ್ನು ಕಟ್ಟಿಕೊಡುವ ದಾರಿದೀಪಗಳಾಗಿವೆ ಎಂದರು.
ಕುವೆಂಪು ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ ವಿಚಾರಗಳು ಯುವಜನತೆಗೆ ದಿಕ್ಸೂಚಿಗಳು. ಅವರ ಕೃತಿಗಳಲ್ಲಿ ಅರಳಿದ ಚಿಂತನೆಗಳೆಲ್ಲವೂ ವಿಶ್ವಮಾನವತೆಯನ್ನು ಸಾರುತ್ತದೆ. ಕುವೆಂಪು ಅವರ ಆಧ್ಯಾತ್ಮಿಕ ಬದುಕು ಶ್ರೀರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಪ್ರಭಾವದಿಂದ ರೂಪುಗೊಂಡಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ.ಮಹದೇವ ಮಾತನಾಡಿ, ಕನ್ನಡ ಸಾರಸ್ವತ ಲೋಕವನ್ನು ವಿಶ್ವವೇ ಗಮನಿಸುವಂತೆ ಮಾಡುವಂತೆ ಮೊದಲು ನಾಂದಿ ಹಾಕಿದವರು ಕುವೆಂಪು. ಅವರು ಇಲ್ಲದ ಕನ್ನಡವಿಲ್ಲ. ಕುವೆಂಪು ಸಾಹಿತ್ಯ ಎಂದಿಗೂ ಸಕಾಲಿಕ ಮತ್ತು ಅಜರಾಮರ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕ ಚಿಲ್ಕುಂದ ಸಿ.ಎಸ್.ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಸ್.ಜಯರಾಂ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಘು ಇತರರು ಇದ್ದರು. ಅರ್ಚನಾ ಮತ್ತು ಸಿಂಗೇಶ್ ವೃಂದದಿಂದ ಕುವೆಂಪು ವಿರಚಿತ ಹಾಡುಗಳ ಗೀತಗಾಯನ ಎಲ್ಲರ ಮೆಚ್ಚುಗೆ ಗಳಿಸಿತು.