ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದರು. ಆರ್.ಐಶ್ವರ್ಯಾ ಇನ್ನಿತರರಿದ್ದರು.
- ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ
- ಎಸ್‌ಐಆರ್ ಕುರಿತು ಸಭೆ
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಶೇ.96 ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿ, ಎಸ್‌ಐಆರ್ ಅರ್ಹತಾ ದಿನಾಂಕವನ್ನು ಅಕ್ಟೋಬರ್ 1ಕ್ಕೆ ನಿಗದಿಪಡಿಸಲಾಗಿದೆ. ಸಿದ್ಧತೆ, ತರಬೇತಿ ಹಾಗೂ ಮುದ್ರಣಕ್ಕೆ ಜೂ.20ರಿಂದ 29ರವರಗೆ ದಿನಾಂಕ ನಿಗದಿಪಡಿಸಲಾಗಿದೆ. ಬಿಎಲ್‌ಒಗಳು ಜೂ.30ರಿಂದ ಜುಲೈ 29ರವರೆಗೆ ಮನೆಗಳಿಗೆ ಭೇಟಿ ನೀಡಲಿದ್ದಾರೆ.
ಜುಲೈ 29ರಂದು ಮತಗಟ್ಟೆಗಳ ರಾಷನಲೈಜೇಷನ್ ಪ್ರಕ್ರಿಯೆ ನಡೆಸಲಾಗುವುದು. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುವುದು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಇವುಗಳನ್ನು ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಇತ್ಯರ್ಥಪಡಿಸಲಾಗುವುದು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ವೇಳಪಟ್ಟಿ ವಿವರಿಸಿದರು.
ಜೂ.30ರಿಂದ ಜುಲೈ 29ವರೆಗೆ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ನೋಂದಣಿ ಅರ್ಜಿ ನೀಡಲಿದ್ದು, ಇದನ್ನು ಭರ್ತಿ ಮಾಡಿದ ನಂತರ ಜುಲೈ 29ರೊಳಗೆ ಪಡೆದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ.96 ಮತದಾರರನ್ನು ಗುರುತಿಸಿ ಕುಟುಂಬಗಳ ಲಿಂಕೇಜ್‌ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿಎಲ್‌ಒ ಹಾಗೂ ಬಿಎಲ್‌ಎ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದು, ಜೂ.30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಎಲ್ಲ ಮನೆಗಳಿಗೆ ಎನ್ಯೂಮರೇಷನ್ ಅರ್ಜಿಯನ್ನು ತಲುಪಿಸುವುದು, ಭರ್ತಿ ಮಾಡಿ ಕೊಡುವ ಬಗ್ಗೆ ಸಾರ್ವಜನಿಕರು ಹಾಗೂ ಬಿಎಲ್‌ಒಗಳು ಸಮನ್ವಯ ಸಾಧಿಸಬೇಕು ಎಂದು ತಿಳಿಸಿದರು.
ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಎನ್ಯೂಮರೇಷನ್ ಅರ್ಜಿ ತಲುಪಿಸಿ, ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಈ ಬೃಹತ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ನೆಲೆಸಿರುವವರ ಹೆಸರು ಹಳೆಯ ವೋಟರ್ ಲಿಸ್ಟ್‌ನಲ್ಲಿ ಇಲ್ಲದಿದ್ದರೆ, ಅವರಿಗೆ ಫ್ಯಾಮಿಲಿ ಲಿಂಕೇಜ್ ಸಿಗುವುದಿಲ್ಲ. ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೆ, ಆ ಮಾಹಿತಿ ಅನುಸಾರ ಹೆಸರು ಸೇರ್ಪಡೆ ಮಾಡಬಹುದು.
ಮ್ಯಾಪಿಂಗ್ ಆಗದೆ ಇರುವವರು ಎನ್ಯೂಮರೇಟರ್ ಅರ್ಜಿಯೊಂದಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲಾತಿ ಸಲ್ಲಿಸಿದರೆ ಮತಪಟ್ಟಿಗೆ ಅವರ ಹೆಸರು ಸೇರಿಸಲು ಕ್ರಮ ವಹಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಶಿಕ್ಷಾರ್ಹ ಅಪರಾಧ
ಸಾರ್ವಜನಿಕರು ತಮಗೆ ನೀಡಲಾಗುವ ಎನ್ಯೂಮರೇಷನ್ ಅರ್ಜಿಯಲ್ಲಿ ನಿಖರ ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ನೀಡುವುದು. ಮರಣ ಹೊಂದಿರುವವರು, ವಲಸೆ ಹೋಗಿರುವವರ ವಿವರ ಭರ್ತಿ ಮಾಡಿ ನೀಡುವುದು ಹಾಗೂ ಇನ್ನಿತರ ತಪ್ಪು ಮಾಹಿತಿ ಒದಗಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಎಚ್ಚರಿಕೆ ನೀಡಿದರು.
ಭಾರತ ದೇಶದ ಪ್ರಜೆಯಾಗಿರುವ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಒಂದು ಸ್ಥಳದಲ್ಲಿ ಮಾತ್ರ ಮತದಾನದ ಹಕ್ಕು ಪಡೆದಿರಬೇಕು ಎಂಬ ಸದುದ್ದೇಶದಿಂದ ಪಾರದರ್ಶಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಲಾಗುತ್ತಿದೆ. ವಿವಿಧ ಪರಿಶೀಲನೆ, ಅಗತ್ಯ ಮಾಹಿತಿ ಹಾಗೂ ದಾಖಲೆ ಪಡೆದ ನಂತರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುವುದು ಎಂದರು.