ಅಂಬಲಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ಅಭಿನಂದನೆ ಸಲ್ಲಿಸಿದರು. 
ಮೈಸೂರು

ಅಂಬಲಾರೆ ಡೇರಿಗೆ 9 ನಿರ್ದೇಶಕರ ಆಯ್ಕೆ

ನಾಗೇಶ ಎಸ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಅಂಬಲಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಭಾನುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 10 ನಿರ್ದೇಶಕ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಕರಿಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, 9 ಸ್ಥಾನಗಳಿಗೆ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತರಾದ ಗೌರಮ್ಮ, ಕಲಾವತಿ, ಎ.ಆರ್ ಶಂಕರೇಗೌಡ, ಜವರೇಗೌಡ, ಎ.ವಿ.ವಸಂತ, ವೀರಭದ್ರಪ್ಪ, ಪ್ರಸನ್ನ, ಪ್ರಭಾಕರ್, ರಾಜೇಶ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಹಿತೇಂದ್ರ ತಂಡ ಕರ್ತವ್ಯ ನಿರ್ವಹಿಸಿತು.
ನೂತನ ನಿರ್ದೇಶಕರಿಗೆ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ಅಭಿನಂದನೆ ಸಲ್ಲಿಸಿದರು. ಅಂಬಲಾರೆ ಗ್ರಾಮದ ಡೇರಿ ಚುನಾವಣೆಯಲ್ಲಿ ನಿರ್ದೇಶಕ ಎಲ್ಲ ಸ್ಥಾನಗಳಿಗೆ ಜೆಡಿಎಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಭದ್ರಕೋಟೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ನಾನು ಮೈಮುಲ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸಲ್ಲಿಸಿದ ಸೇವೆಯು ಪ್ರಾಮಾಣಿಕವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಇರಬೇಕು. ತಾಲೂಕಿನಲ್ಲಿ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಇಲ್ಲಿನ ಜನರು ಸರಿಯಾದ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಜೆಡಿಎಸ್ ತನ್ನದೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಅಲ್ಲದೆ ನೂತನ ಆಡಳಿತ ಮಂಡಳಿಯವರು ಸದಸ್ಯರ ಪರ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಂಘದ 10 ಸ್ಥಾನಗಳಿಗೂ ಸಂಪೂರ್ಣ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ಕೆ.ಸುರೇಶ, ಚಪ್ಪರದಹಳ್ಳಿ ಕುಶಾಲ್ ಗೌಡ, ಕೃಷ್ಣೇಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಮಂಜುನಾಥ್ ಆರ್. ಗೌಡ, ತಾಲೂಕು ಅಧ್ಯಕ್ಷ ಸುಂದ್ರೆಗೌಡ, ಸಿ.ಪಿ. ಸುರೇಶ, ಮುಕುಂದಾಚಾರಿ, ರಂಗಸ್ವಾಮಿ, ಮೋಹನ್, ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಗ್ರಾಮದ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಇದ್ದರು.