ಮೈಸೂರು ಜಿಲ್ಲಾ ಪಂಚಾಯಿತಿ 
ಮೈಸೂರು

85 ಅಮೃತ ಸರೋವರಗಳಲ್ಲಿ ಸ್ವಾತಂತ್ರೃ ಡಿಂಡಿಮ

ಪ್ರಮುಖ ಮುಖ್ಯಾಂಶಗಳು

  • ದಡದಲ್ಲಿ ತ್ರಿವರ್ಣ ಧ್ವಜ ಹಾರಿಸಲು ತಯಾರಿ
  • ಮೈಸೂರು ಜಿಲ್ಲಾ ಪಂಚಾಯಿತಿಯಿಂದ ಸಕಲ ಸಿದ್ಧತೆ

ಒಂದೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ... ಮತ್ತೊಂದೆಡೆ ಜಲಸಂರಕ್ಷಣೆಯ ಸಂಕಲ್ಪ... ಜಿಲ್ಲೆಯ 85 ಅಮೃತ ಸರೋವರಗಳ ದಡಗಳು ಈ ಬಾರಿ ದೇಶಭಕ್ತಿ ಮತ್ತು ಪರಿಸರ ಜಾಗೃತಿಯ ಅಪೂರ್ವ ವೇದಿಕೆಯಾಗಲಿವೆ.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಜಿಲ್ಲೆಯ 85 ಅಮೃತ ಸರೋವರಗಳ ದಂಡೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲು ಮೈಸೂರು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.
ಸರೋವರಗಳ ದಡದಲ್ಲಿ ಗಣ್ಯರಿಂದ ಧ್ವಜಾರೋಹಣ ನಡೆಯಲಿದ್ದು, ಬಳಿಕ ತಿರಂಗ ಯಾತ್ರೆ, ದೇಶಭಕ್ತಿಗೀತೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಾಲಾ ಮಕ್ಕಳು, ಗ್ರಾಮಸ್ಥರು, ಜನಪ್ರತಿನಿಧಿಗಳು, ಯುವಕ್ಲಬ್‌ಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತ್ರಿವರ್ಣದ ಜತೆಗೆ ಹಸಿರಿನ ಸಂಕಲ್ಪ:

ಸ್ವಾತಂತ್ರ್ಯೋತ್ಸವದ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಅಮೃತ ಸರೋವರಗಳ ಸುತ್ತಮುತ್ತ ಗಿಡ ನೆಡುವ ಕಾರ್ಯಕ್ರಮಕ್ಕೂ ಒತ್ತು ನೀಡಲಾಗಿದೆ. ನೀರು ಉಳಿಸಿ, ಪರಿಸರ ಕಾಪಾಡಿ ಎಂಬ ಸಂದೇಶವನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಮಳೆ ಕೊರತೆ, ಬರ ಪರಿಸ್ಥಿತಿ ಹಾಗೂ ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ವೈಯಕ್ತಿಕ ಮತ್ತು ಸಮುದಾಯದ ಜಲಸಂರಕ್ಷಣಾ ಕಾಮಗಾರಿಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜತೆಗೆ ವಿಬಿ ಜಿ ರಾಮ್‌ಜಿ ಯೋಜನೆಯಡಿ ಗ್ರಾಮೀಣ ಜನರಿಗೆ ದೊರೆಯುವ ಉದ್ಯೋಗ ಹಾಗೂ ವೈಯಕ್ತಿಕ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು.

ಎಂಟು ತಾಲೂಕುಗಳಲ್ಲಿ ಆಚರಣೆ:

ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ 16 ಸರೋವರಗಳು, ಹುಣಸೂರು 16, ಮೈಸೂರು 15, ನಂಜನಗೂಡು 5, ಪಿರಿಯಾಪಟ್ಟಣ 4, ಸಾಲಿಗ್ರಾಮ 6, ಸರಗೂರು 8 ಹಾಗೂ ತಿ.ನರಸೀಪುರ 15 ಅಮೃತ ಸರೋವರಗಳಲ್ಲಿ ಧ್ವಜಾರೋಹಣ ನಡೆಯಲಿದೆ.
ಸ್ವಾತಂತ್ರೃದ ಸಂಭ್ರಮದ ಜತೆಗೆ ಜಲ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಬಿ ಜಿ ರಾಮ್‌ಜಿ ಯೋಜನೆಯಡಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪ್ರೇರಣೆ ನೀಡಲಾಗುವುದು. ಬರ ಪರಿಸ್ಥಿತಿ ಎದುರಿಸಲು ವೈಯಕ್ತಿಕ ಹಾಗೂ ಸಮುದಾಯದ ಜಲಸಂರಕ್ಷಣಾ ಕಾಮಗಾರಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ತಿಳಿಸಿದ್ದಾರೆ.
"

ಮಳೆ ಅಭಾವ ಮತ್ತು ಅಂತರ್ಜಲ ಕುಸಿತದ ಹಿನ್ನೆಲೆ 85 ಅಮೃತ ಸರೋವರಗಳಲ್ಲೂ ಜಲ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಗುವುದು. ಸ್ವಾತಂತ್ರೃಕ್ಕಾಗಿ ತ್ಯಾಗ ಮಾಡಿದವರನ್ನು ಸ್ಮರಿಸಿ ಗೌರವಿಸುವ ಮೂಲಕ ಈ ಬಾರಿಯ ಸ್ವಾತಂತ್ರೊೃೀತ್ಸವವನ್ನು ಅರ್ಥಪೂರ್ಣಗೊಳಿಸಲಾಗುವುದು.

— ಭೀಮಪ್ಪ ಕ.ಲಾಳಿ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ)

"

ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ವಿಬಿ ಜಿ ರಾಮ್‌ಜಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ, ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಜಿಲ್ಲೆಯ 85 ಅಮೃತ ಸರೋವರಗಳ ದಂಡೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ.

— - ಎಸ್. ಯುಕೇಶ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ