ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಲಾದ ಪ್ರಥಮ ಹಂತದ 75 ಸಾವಿರ ರೂ. ಧನ ಸಹಾಯ ನೀಡಲಾಯಿತು. 
ಮೈಸೂರು

75 ಸಾವಿರ ರೂ. ಸಹಾಯಧನ ಹಸ್ತಾಂತರ

ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಥಮ ಹಂತದಲ್ಲಿ 75 ಸಾವಿರ ರೂ. ಧನ ಸಹಾಯ ನೀಡಿದ್ದು, ಅದನ್ನು ಮಂಗಳವಾರ ಡೇರಿ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಯಿತು.
ಹುಲ್ಲಹಳ್ಳಿ ಯೋಜನಾ ಕಚೇರಿಯ ಮುಳ್ಳೂರು ವಲಯ ವ್ಯಾಪ್ತಿಯ ಕೊತ್ತೇಗಾಲ ಡೇರಿ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಹದೇವಸ್ವಾಮಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಗಣೇಶನಾಯಕ್, ಮುಳ್ಳೂರು ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಅವರು ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ನಂತರ ಮಾತನಾಡಿದ ಯೋಜನಾಧಿಕಾರಿ ಗಣೇಶನಾಯಕ್, ಡೇರಿ ಕಟ್ಟಡ ನಿರ್ಮಾಣಕ್ಕೂ ಧನ ಸಹಾಯ ನೀಡುತ್ತಿದ್ದು, ಅದರಂತೆ ಮಂಗಳವಾರ ಕೊತ್ತೇಗಾಲ ಗ್ರಾಮಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಡೇರಿ ಉನ್ನತಮಟ್ಟದಲ್ಲಿ ಬೆಳೆಯಬೇಕು ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯವಾಗಿದೆ. ಹೀಗಾಗಿ ಎಲ್ಲರೂ ಹೆಚ್ಚಿನ ಹಾಲು ಉತ್ಪಾದನೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಆ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಮುಳ್ಳೂರು ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿದರು. ಸ್ಥಳೀಯ ಸೇವಾ ಪ್ರತಿನಿಧಿ ನಾಗರಾಜ್, ವಿಎಲ್‌ಇ ರಾಕೇಶ್, ಹಾಲು ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಸಂಘದ ಸದಸ್ಯರು ಹಾಜರಿದ್ದರು.