ಮೈಸೂರು ಮಹಾನಗರ ಪಾಲಿಕೆ 
ಮೈಸೂರು

ಗ್ರೇಟರ್ ಮೈಸೂರು ಯುಜಿಡಿಗೆ 600 ಕೋಟಿ

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ
  • ಬಜೆಟ್‌ನಲ್ಲಿ ಅನುದಾನ ಘೋಷಣೆ ಸಾಧ್ಯತೆ
ಮೈಸೂರು: ನಗರದ ಸುತ್ತಮುತ್ತಲಿರುವ ಪ್ರದೇಶಗಳನ್ನು ಸೇರಿಸಿ ರಾಜ್ಯ ಸರ್ಕಾರ ಬೃಹತ್ ಮೈಸೂರು ಮಹಾನಗರ ಪಾಲಿಕೆ (ಗ್ರೇಟರ್ ಮೈಸೂರು) ರಚನೆಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಗ್ರೇಟರ್ ಮೈಸೂರು ವ್ಯಾಪ್ತಿಯಲ್ಲಿ ಯುಜಿಡಿ ಸಮಸ್ಯೆಗಳು ತಲೆದೂರದಂತೆ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಗ್ರೇಟರ್ ಮೈಸೂರು ವ್ಯಾಪ್ತಿಯಲ್ಲಿ ಮೈಸೂರು ನಗರ ಸೇರಿದಂತೆ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿಗಳು, ಇಲವಾಲ, ಸಿದ್ದಲಿಂಗಪುರ, ಚಾಮುಂಡಿಬೆಟ್ಟ, ನಾಗನಹಳ್ಳಿ, ನಾಗವಾಲ, ಧನಗಳ್ಳಿ, ಬೀರಿಹುಂಡಿ ಹಾಗೂ ಆಲನಹಳ್ಳಿ ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಲಿದೆ. ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉತ್ತನಹಳ್ಳಿ, ಬಂಡಿಪಾಳ್ಯ, ಹೊಸಹುಂಡಿ, ಮರ್ಸಿ, ಮದರಗಳ್ಳಿ, ಏಳಿಗೆಹುಂಡಿ, ಗುಡುಮಾದನಹಳ್ಳಿ, ಗೆಜ್ಜಗಳ್ಳಿ, ಮಂಡಕಳ್ಳಿ ಪ್ರದೇಶ ಹಾಗೂ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾದನಹಳ್ಳಿ ಗ್ರಾಮ ಒಳಗೊಂಡಿದೆ.
2011ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ 9,20,550 ಜನಸಂಖ್ಯೆ ಇದ್ದು, ಪ್ರಸ್ತುತ 11,46,069 ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಗ್ರೇಟರ್ ಮೈಸೂರು ವ್ಯಾಪ್ತಿಯ ಪ್ರದೇಶದಲ್ಲಿ 14,16,671 ಜನಸಂಖ್ಯೆ ಇದೆ ಎಂದು ಅಂದಾಜಿಸ ಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಇದಕ್ಕೆ ಪೂರಕವಾಗಿ ಯುಜಿಡಿ ವ್ಯವಸ್ಥೆಯನ್ನು ಉತ್ತಮ ಪಡಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
600 ಕೋಟಿ ರೂ. ಯೋಜನೆ:
ಗ್ರೇಟರ್ ಮೈಸೂರು ವ್ಯಾಪ್ತಿಯ ಪ್ರದೇಶದಲ್ಲಿ ಮುಂದಿನ 30 ರಿಂದ 50 ವರ್ಷಗಳ ಅವಧಿಯಲ್ಲಿ ಯಾವುದೇ ರೀತಿಯ ಯುಜಿಡಿ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ಮಾಡುವ ಉದ್ದೇಶದಿಂದ ಯುಜಿಡಿ ಶಾಶ್ವತ ಪರಿಹಾರಕ್ಕೆ 600 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದೆ.
ಕಳೆದ ಒಂದು ದಶಕದ ಹಿಂದೆ ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಹಾದು ಹೋಗುವ ಯುಜಿಡಿ ಲೈನ್ ಕೆಸರೆ ಮತ್ತು ವಿದ್ಯಾರಣ್ಯಪುರಂ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದರೂ ಅಲ್ಲಲ್ಲಿ ಲಿಂಕ್ ತಪ್ಪಿ ಮಳೆ ನೀರು ಚರಂಡಿಗೆ ಸೇರುತ್ತಿದೆ. ಅದರಲ್ಲೂ ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್ ಬಳಿ, ಕೆಸರೆ ಸಮೀಪ ಲೈನ್ ಮಿಸ್ಸಿಂಗ್ ಆಗಿರುವ ಕಾರಣ ಶ್ರೀರಂಗಪಟ್ಟಣದ ಮೇಳಾಪುರದಲ್ಲಿ ಹಾದು ಹೋಗುವ ಕಾವೇರಿ ನದಿಗೆ ಕಲುಷಿತ ನೀರು ಸೇರುತ್ತಿದೆ. ಇದಲ್ಲದೆ, ಮಳೆ ಬಂದಾಗ ಯುಜಿಡಿ ಸಮಸ್ಯೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ, ಇದೀಗ ಗ್ರೇಟರ್ ಮೈಸೂರು ರಚನೆಯಾಗುವ ಹಿನ್ನೆಲೆಯಲ್ಲಿ ಯುಜಿಡಿ ಸಮಸ್ಯೆ ಮತ್ತಷ್ಟು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ಸಮಸ್ಯೆಗೆ ಈಗಲೇ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.
ಮಾರ್ಚ್ ತಿಂಗಳಿನಲ್ಲಿ ಮಂಡನೆಯಾಗಲಿರುವ ಬಜೆಟ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೈಸೂರು ನಗರ ಮತ್ತು ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದು, ತವರು ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಕೊಡುಗೆಗಳನ್ನು ಘೋಷಿಸುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಯುಜಿಡಿ ಜಾಲ ಅಭಿವೃದ್ಧಿಗೆ ಅನುದಾನ ನೀಡಿದರೆ ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಮಳೆಬಂದಾಗ ಯುಜಿಡಿ ಸಮಸ್ಯೆ ಉಂಟಾಗದಂತೆ ಪ್ರತಿಯೊಂದು ಬೀದಿಗಳಲ್ಲೂ ಯುಜಿಡಿ ಮಾರ್ಗ ಅಳವಡಿಸಿ ಹೊಸದಾಗಿ ಮ್ಯಾನ್‌ಹೋಲ್‌ಗಳನ್ನು ಹಾಕಲಾಗುತ್ತದೆ. ಜೋರು ಮಳೆ ಬಂದರೂ ರಸ್ತೆ ಬದಿಯಲ್ಲಿ ಮಲೀನ ನೀರು ಉಕ್ಕಿ ಹರಿಯದಂತೆ ಮಾಡಲು ಪ್ಲಾನ್ ಮಾಡಲಾಗಿದೆ. ಅದೇ ರೀತಿ ಕೆಸರೆ ಮತ್ತು ವಿದ್ಯಾರಣ್ಯಪುರಂ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮರು ಬಳಕೆ ಮಾಡಿ ಕೃಷಿ ಮೊದಲಾದ ಚಟುವಟಿಕೆಗಳಿಗೆ ಬಳಸುವಂತಹ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲು ಈ ಯೋಜನೆಯಲ್ಲಿ ಸೇರಿಸಲಾಗಿದೆ. ರಾಜ್ಯ ಸರ್ಕಾರ ಗ್ರೇಟರ್ ಮೈಸೂರು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದ ಯುಜಿಡಿ ಜಾಲ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದೆ.
ಈಗಾಗಲೇ ನಗರದ ಯುಜಿಡಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸ ಲಾಗಿದೆ. ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 600 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನದಿಂದ ನಗರದ ಯುಜಿಡಿ ಸಮಸ್ಯೆ ಸಂಪೂರ್ಣ ಬಗೆಹರಿಯುವ ಸಾಧ್ಯತೆ ಇದೆ.
ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ