ಕೆ.ಆರ್. ನಗರದ ಶವಾಗಾರದ ಮುಂದೆ ನೆರೆದಿರುವ ಜನಸ್ತೋಮ
ಕೆ.ಆರ್. ನಗರ/ ಮೈಸೂರು: ಪಟ್ಟಣದ ಹೊರ ವಲಯದ ಹಳೇ ಎಡತೊರೆಯ ಸೈಯದ್ ಖಾದರ್ ಲಿಂಗಾವಲಿ ಅವರ ದರ್ಗದಲ್ಲಿ ನಡೆಯುವ ಉರುಸ್ ಮತ್ತು ಖವಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಆರು ಜನರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೈಸೂರಿನ ಉದಯಗಿರಿ ನಿವಾಸಿ ಪ್ರಸ್ತುತ ಊಟಿನಲ್ಲಿ ನೆಲೆಸಿರುವ ಇಸ್ಮಾಯಿಲ್ ಪತ್ನಿ ಫಾತಿಮಾ (42), ಬೆಂಗಳೂರಿನ ಎಸ್‌ಬಿಆರ್ ಲೇಔಟ್‌ನ ಮಹಮ್ಮದ್ ಬಾಬು ಪುತ್ರ ಮಹಮ್ಮದ್ ಯಾಸೀನ್ (23) ಹಾಗೂ ಮುಹಮ್ಮದ್ ಯಾಸೀನ್ ಪತ್ನಿ ನೇಹಾ ಕೌಸರ್ (19), ಉದಯಗಿರಿಯ ಸಾದಿಕ್ ಪುತ್ರ ಉಜೇರ್ (5), ಬೆಂಗಳೂರಿನ ಕಾಡಗೌಡನಹಳ್ಳಿ ಆರಿಫ್ ಪುತ್ರಿ ಐಮಾ (13), ಕೆ.ಆರ್. ನಗರದ ಮುಸ್ಲಿಂ ಬ್ಲಾಕ್‌ನ ರಿಯಾಜ್ ಪಾಷ ಪುತ್ರ ಆಸಿಫ್ ಅಹಮದ್ ಮೃತರು.
ಸೈಯದ್ ಖಾದರ್ ಲಿಂಗಾವಲಿ ಅವರ ದರ್ಗದಲ್ಲಿ ನಡೆಯುವ ವಾರ್ಷಿಕ ಉರುಸ್‌ನಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಈ ರೀತಿ ಆಗಮಿಸುವ ಭಕ್ತಾದಿಗಳು ಕಾವೇರಿ ನದಿಯಲ್ಲಿ ಸ್ನಾನ ಹಾಗೂ ಕೈ ಕಾಲು ತೊಳೆಯುವುದನ್ನು ಮಾಡುತ್ತಾರೆ.
ಉರುಸ್ ನಡೆಯುವ ಸಮೀಪದಲ್ಲಿಯೇ ಇರುವ ಆರ್ಕೇಶ್ವರ ದೇವಾಲಯ ಬಳಿಯಲ್ಲಿ ಹೆಚ್ಚು ಅಪಾಯ ಇಲ್ಲ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೆ ಕೆ.ಆರ್. ನಗರಕ್ಕೆ ನೀರು ಪೂರೈಕೆ ಮಾಡಲು ಕಾವೇರಿ ನದಿಗೆ ಅಡ್ಡಲಾಗಿ ಮರಳಿ ಮೂಟೆಯಿಂದ ತಡೆಗೋಡೆ ನಿರ್ಮಿಸಲಾಗಿದ್ದು, ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಗೂ ಕೆಸರು ಸಂಗ್ರಹವಾಗಿದೆ.
ಇವರ ತಂಡದಲ್ಲಿ ಒಟ್ಟು 9 ಜನರು ಇದ್ದರು. ಈ ಪೈಕಿ ಒಬ್ಬರು ಊಟವನ್ನು ತರಲು ಸ್ಥಳದಿಂದ ತೆರಳಿದ್ದರು. ಊಟ ತರಲು ಹೋದ ವ್ಯಕ್ತಿ ವಾಪಾಸ್ ಬಂದು ನೋಡಿದಾಗ 8 ಜನರು ನೀರಿನಲ್ಲಿ ಮುಳುಗಿರುವುದು ಕಂಡು ಬಂತು. ಈ ಪೈಕಿ ಇಬ್ಬರನ್ನು ನೀರಿನಿಂದ ಮೇಲೆತ್ತಲು ಯಶಸ್ವಿಯಾದರು. ಆದರೆ, ಉಳಿದ 6 ಜನರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತಿ ಕೆ.ಆರ್. ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಮೃದ್ಧಿ ಆಸ್ಪತ್ರೆಗಳಿಗೆ ಕರೆತಂದರು. ವೈದ್ಯರು ಪರೀಕ್ಷಿಸಿದ ನಂತರ ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಂಸ್ತಾತರಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಮತ್ತು ಮೃತರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದರಲ್ಲದೇ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಸ್ಥಳಕ್ಕೆ ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ರಾಜಣ್ಣ, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ಇದ್ದರು.