ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಮೂಲ ಸೌಕರ್ಯಗಳ ಕೊರತೆ ನಿವಾರಣೆಗೂ ಕ್ರಮ ವಹಿಸಲಾಗಿದ್ದು,ಇಂತಹ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಷಯಾಧಾರಿತ ಶಿಕ್ಷಕರನ್ನು ಒದಗಿಸಲಾಗಿದೆ. ಶಿಕ್ಷಕರ ಹುದ್ದೆಗಳು ಖಾಲಿ ಇರುವಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಉತ್ತಮ ಕಲಿಕಾ ವಾತಾವರಣ ನಿರ್ಮಿಸಿಕೊಡಲಾಗುತ್ತಿದೆ. ಡಿ.ಉದಯ ಕುಮಾರ್ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ
ಗ್ರಾಮೀಣ, ನಗರ ಪ್ರದೇಶಗಳ ಮಕ್ಕಳಿಗೂ ಖಾಸಗಿ ಶಾಲೆಗಳಿಗೆ ಸಮಾನವಾದ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಕಲಿಕಾ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲೇ ಕಲ್ಪಿಸುವ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆಯಾಗಿದ್ದು, 50 ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ಉನ್ನತೀಕರಣಗೊಳ್ಳುತ್ತಿವೆ.
ಉನ್ನತೀಕರಣವೆಂದರೆ ಕೇವಲ ಕಟ್ಟಡಗಳ ಅಭಿವೃದ್ಧಿಯಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ, ಶೈಕ್ಷಣಿಕ ಸಮಾನತೆ ಸಾಧಿಸುವ, ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ತಲುಪಿಸುವ ದೂರದೃಷ್ಟಿಯ ಯೋಜನೆಯೂ ಆಗಿದೆ.
ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ, ಗುಣಮಟ್ಟದ ಶಿಕ್ಷಣವನ್ನು ಎಲ್ಲ ಮಕ್ಕಳಿಗೂ ಸಮಾನವಾಗಿ ತಲುಪಿಸುವ ಉದ್ದೇಶ ಹೊಂದಿರುವ ಮಹತ್ವದ ಶೈಕ್ಷಣಿಕ ಪರಿಕಲ್ಪನೆ ಕೂಸಾಗಿರುವ ಕೆಪಿಎಸ್ ಶಾಲೆಗಳು ಸಂಖ್ಯೆ ಜಿಲ್ಲೆಯಲ್ಲಿ 62ಗೆ ಹೆಚ್ಚಾಗಿದೆ. ಈ ಯೋಜನೆ 2018ರಿಂದ ಕಾರ್ಯಾರಂಭ ಮಾಡಿವೆ. ಮೊದಲಿಗೆ 12 ಸರ್ಕಾರಿ ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆಗೊಂಡವು.
ಎಚ್.ಡಿ.ಕೋಟೆ, ಮೈಸೂರು ಗ್ರಾಮಾಂತರ, ಪಿರಿಯಾಪಟ್ಟಣ ತಾಲೂಕಿನಲ್ಲಿ ತಲಾ 2, ಹುಣಸೂರು, ಕೆ.ಆರ್.ನಗರ, ಮೈಸೂರು ಉತ್ತರ, ಮೈಸೂರು ದಕ್ಷಿಣ, ನಂಜನಗೂಡು, ತಿ.ನರಸೀಪುರದಲ್ಲಿ ತಲಾ 1 ಕೆಪಿಎಸ್ ಶಾಲೆಗಳು ಶುರುವಾದವು. ಈಗ ಎಡಿಬಿ ಸಾಲ ಯೋಜನೆಯಡಿ 30 ಕೆಪಿಎಸ್ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಪಿಎಂ ಶ್ರೀ ಯೋಜನೆಯೊಂದಿಗೆ ಸಂಜಯೋಜನೆಗೊಂಡಿರುವ 20 ಶಾಲೆಗಳೂ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹಂತ ಹಂತವಾಗಿ ಕೆಪಿಎಸ್ ಶಾಲೆಗಳ ಪ್ರಮಾಣ ವೃದ್ಧಿಯಾಗುತ್ತಿದೆ.
ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ಉನ್ನತೀಕರಿಸಲಾಗುತ್ತಿರುವ ಈ ಶಾಲೆಗಳಲ್ಲಿ ಕನಿಷ್ಠ 1200 ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಪ್ರತಿ ಶಾಲೆಗೆ 2 ಕೋಟಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ಈ ಶಾಲೆಗಳನ್ನು ಉನ್ನತಿಯಾಗಲಿವೆ.
ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಆಧುನಿಕ ಸೌಲಭ್ಯ ಕಲ್ಪಿಸಲು, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಕಲಿಕಾ ವಾತಾವರಣ ನಿರ್ಮಿಸಲು ಕೆಪಿಎಸ್ ಜತೆಗೆ ಪಿಎಂಶ್ರೀ ಯೋಜನೆಯ ಸಂಯೋಜಿಸಲಾಗಿದೆ. ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕಿನಲ್ಲಿ ತಲಾ 3, ಮೈಸೂರು ಉತ್ತರ, ಮೈಸೂರು ದಕ್ಷಿಣ ವಲಯದಲ್ಲಿ ತಲಾ ಒಂದು ಪಿಎಂ ಶ್ರೀ ಕೆಪಿಎಸ್ ಶಾಲೆಗಳಿವೆ.
ಮೈಸೂರು ಗ್ರಾಮಾಂತರ ವಲಯದಲ್ಲಿ ಮಾತ್ರ ಇಂತಹ ಒಂದೂ ಶಾಲೆಯಿಲ್ಲ. ಕೇಂದ್ರ ಸರ್ಕಾರದ ಪಿಎಂ ಶ್ರೀ ಯೋಜನೆಯಡಿ ಇಂತಹ ಶಾಲೆಗಳಲ್ಲಿ ಮೂಲಸೌಕರ್ಯ, ಕಲಿಕಾ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಉನ್ನತೀಕರಿಸಲಾಗುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈಸೂರು ಜಿಲ್ಲೆಯಲ್ಲಿ ಒಂದೂ ಇಲ್ಲ.
ಕೆಪಿಎಸ್ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶ ಹೊಂದಿದ್ದರೂ ಅನುಷ್ಠಾನ, ನಿರ್ವಹಣೆಯಲ್ಲಿ ಹಲವು ಸವಾಲುಗಳು ಎದುರಾಗುತ್ತಿವೆ. ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಜತೆಗೆ ಬೋಧನಾ ಗುಣಮಟ್ಟ, ಆಡಳಿತ ವ್ಯವಸ್ಥೆ, ಶಿಕ್ಷಕರ ಲಭ್ಯತೆ, ಮೂಲಸೌಕರ್ಯಗಳ ಕಡೆಗೂ ಹೆಚ್ಚಿನ ಗಮನ ನೀಡಬೇಕಾಗಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸೌಲಭ್ಯಗಳ ಕೊರತೆ, ಕುಡಿಯುವ ನೀರು, ಸ್ವಚ್ಛ ಶೌಚಗೃಹಗಳ ನಿರ್ವಹಣೆಯ ಸಮಸ್ಯೆ, ಶಾಲಾ ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆಯಲ್ಲಿ ವಿಳಂಬ.. ಹೀಗೆ ಮೂಲಸೌಕರ್ಯ ಸಮಸ್ಯೆ ತೀವ್ರವಾಗಿದೆ.
ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ಪರಿಣತ ಶಿಕ್ಷಕರ ಕೊರತೆ ಕಾಡುತ್ತಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿಭಾಗಗಳ ನಡುವೆ ಸಮನ್ವಯದ ಕೊರತೆ, ಆಡಳಿತಾತ್ಮಕ ಜವಾಬ್ದಾರಿಗಳ ಸ್ಪಷ್ಟ ಹಂಚಿಕೆ ಇಲ್ಲದಿರುವುದು, ಅನುದಾನ ಬಳಕೆ ಮತ್ತು ಹಣಕಾಸು ನಿರ್ವಹಣೆಯಲ್ಲಿ ವಿಳಂಬ, ಶಾಲೆಗಳ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದ ಕೊರತೆ, ಇಲಾಖೆಗಳ ನಡುವೆ ಸಮರ್ಪಕ ಸಂವಹನ ಇಲ್ಲ. ಇಂತಹ ಆಡಳಿತಾತ್ಮಕ ಸಮಸ್ಯೆಗಳೂ ಇವೆ.
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಅಗತ್ಯ ಪ್ರೋತ್ಸಾಹದ ಕೊರತೆ, ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ, ಇಂಗ್ಲಿಷ್ ಭಾಷಾ ಜ್ಞಾನ ಹೆಚ್ಚಿಸುವ ಸವಾಲು, ಡಿಜಿಟಲ್ ಶಿಕ್ಷಣ, ಪ್ರಾಯೋಗಿಕ ಕಲಿಕೆಗೆ ಸೀಮಿತ ಅವಕಾಶ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಸಮಸ್ಯೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ, ವಿದ್ಯಾರ್ಥಿಗಳ ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆಯ ಸಮಸ್ಯೆ ಇಂತಹ ಶೈಕ್ಷಣ ಗುಣಮಟ್ಟದ ಸವಾಲುಗಳು ಎದುರಾಗಿವೆ. ಅನುದಾನ- ನಿರ್ವಹಣೆಯ ಸಮಸ್ಯೆ, ಪಾಲಕರು, ಸಮುದಾಯದ ಸಹಭಾಗಿತ್ವದ ಕೊರತೆಯೂ ಇದೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗಲೇ ಈ ಶಾಲೆಗಳ ನೈಜ ಉನ್ನತೀಕರಣ ಸಾಧ್ಯವಾಗಲಿದೆ.