ಸರಗೂರು ಪಟ್ಟಣದಲ್ಲಿ ಶ್ರೀಚಿಕ್ಕದೇವಮ್ಮನವರ 49ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. 
ಮೈಸೂರು

ವಿಜೃಂಭಣೆಯ ಶ್ರೀಚಿಕ್ಕದೇವಮ್ಮನವರ ಪಲ್ಲಕ್ಕಿ ಉತ್ಸವ

ಸರಗೂರು: ಪಟ್ಟಣದಲ್ಲಿ ನಾಯಕ ಸಮಾಜದ ವತಿಯಿಂದ ಶ್ರೀಚಿಕ್ಕದೇವಮ್ಮನವರ 49ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಚಿಕ್ಕದೇವಮ್ಮನವರ ದೇವಾಲಯದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹದ ಹೋಮ, ದುರ್ಗಹೋಮ ಸೇರಿದಂತೆ ವಿವಿಧ ಹೋಮಗಳು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಇದಕ್ಕೂ ಮೊದಲು ಕಪಿಲಾ ನದಿಗೆ ತೆರಳಿ ಗಂಗೆಪೂಜೆ ನಡೆಸಲಾಯಿತು. ಚಿಕ್ಕದೇವಮ್ಮನವರ ಉತ್ಸವಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪಲ್ಲಕ್ಕಿ ಮೇಲೆ ಅಮ್ಮನವರ ವಿಗ್ರಹ ಕೂರಿಸಿ ಪೂರ್ಣಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮಂಗಳವಾದ್ಯ, ಬ್ಯಾಂಡ್‌ಸೆಟ್, ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.
ಗಮನ ಸೆಳೆದ ವೀರಗಾಸೆ: ವಿವಿಧ ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದವು. ಮಂಗಳವಾದ್ಯ, ಬ್ಯಾಂಡ್‌ಸೆಟ್ ನಾದ ಮೊಳಗಿದವು. ಹಳೇ ಹೆಗ್ಗುಡಿಲು ನೀಲಕಂಠ ತಂಡದಿಂದ ಪ್ರದರ್ಶಿಸಿದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ಉತ್ಸವ ದೇವಾಲಯ ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.
ಕಪಿಲಾ ನದಿ ದಡದಿಂದಲೂ ಸಾಗಿದ ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ಪೂರ್ಣಕುಂಭ ಹೊತ್ತು ಹರಕೆ ತೀರಿಸಿದರು. ಇನ್ನು ಕೆಲ ಬಾಲಕಿಯರು, ಮಹಿಳೆಯರು ದಾರಿಯುದ್ದಕ್ಕೂ ಉತ್ಸವಮೂರ್ತಿಗೆ ಆರತಿ ಎತ್ತಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.
ಪಟ್ಟಣ ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದಲೂ ಸಾವಿರಾರು ಭಕ್ತರುವ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದರು.
ನಾಯಕ ಸಮಾಜದ ಯಜಮಾನರು, ಪಪಂ ಸದಸ್ಯರು ಹಾಗೂ ಮುಖಂಡರು, ಮಹಿಳೆಯರು, ನಾಯಕ ಸಮಾಜದ ಯಜಮಾನರು, ಮುಖಂಡರು ಹಾಜರಿದ್ದರು.