ಗೆದ್ದವರು ಬೀಗದೇ, ಸೋತವರು ಕುಗ್ಗದೆ, ಪ್ರತಿಯೊಂದು ಆಟವನ್ನು ಸ್ಫೂರ್ತಿಯನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕಿವಿಮಾತು ಹೇಳಿದರು.
ನಗರದ ಪೆವಿಲಿಯನ್ ಮೈದಾನದಲ್ಲಿ ಯುವಾತ್ಮ ಮೈಸೂರು ವತಿಯಿಂದ ಭಾನುವಾರ ಆಯೋಜಿಸಿದ್ದ ಧನ್ವಂತರಿ ಪ್ರೀಮಿಯರ್‌ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಪಂಚದಾದ್ಯಂತ ಕ್ರಿಕೆಟ್ ಹೆಚ್ಚು ಜನಮನ್ನಣೆ ಪಡೆದುಕೊಂಡಿದ್ದು, ಭಾರತದಲ್ಲಿ ಅತಿ ಮುಖ್ಯವಾದ ಕ್ರೀಡೆಯಾಗಿದೆ. ಪ್ರತಿಯೊಬ್ಬ ಯುವಕರಲ್ಲೂ ಇವತ್ತಿನ ದಿನಗಳಲ್ಲಿ ಕ್ರಿಕೆಟ್ ಅಡಕವಾಗಿದೆ. ಇತ್ತೀಚೆಗೆ ಭಾರತ ಟಿ-20 ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಇಂತಹ ಜನಪ್ರಿಯ ಕ್ರೀಡೆಯನ್ನು ಆಡುವ ಮೂಲಕ ಎಲ್ಲವನ್ನು ಬೆಸೆಯುವ ಕೆಲಸವಾಗಲಿದೆ ಎಂದರು.
ಸಮುದಾಯದ ಯುವಕರು ಸೇರಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಕಾರ್ಯ. ಕ್ರಿಕೆಟ್ ಪಂದ್ಯಾವಳಿ ದೈಹಿಕವಾಗಿ ಆರೋಗ್ಯವಾಗಿರಲು ಸಹಾಯ ಮಾಡಬಲ್ಲದು. ಪಂದ್ಯಾವಳಿಯಲ್ಲಿ ಎಷ್ಟೇ ತಂಡಗಳು ಭಾಗವಹಿಸಿದ್ದರೂ ಒಂದು ತಂಡಕ್ಕೆ ಮಾತ್ರ ಗೆಲುವು ಸಾಧ್ಯ. ಹಾಗಾಗಿ ಗೆಲುವು-ಸೋಲನ್ನು ಸಮನಾಗಿ ಸ್ವೀಕರಿಸಿ ಎಂದರು.
ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಕ್ರಿಕೆಟ್ ಇವತ್ತು ಭಾರತೀಯ ಕ್ರೀಡೆಯಾಗಿ ಬೆಳೆದಿದೆ. ವಿವಿಧ ಭಾಗಗಳಿಂದ ಯುವಕರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ಸಮುದಾಯದ ಯುವಕರೇ ಕ್ಲಬ್‌ಗಳನ್ನು ಸ್ಥಾಪಿಸಿ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಿದ್ದಾರೆ. ಬಹಳ ಹಿಂದಿನಿಂದಲೂ ಸಮುದಾಯಕ್ಕೂ ಕ್ರಿಕೆಟ್‌ಗೂ ಅವಿನಾಭಾವ ಸಂಬಂಧವಿದೆ. ಭಾರತ ಕ್ರಿಕೆಟ್ ತಂಡಗಳಲ್ಲಿ ಸಮುದಾಯದ ಸಾಕಷ್ಟು ಯುವಕರು ಆಟವಾಡಿ, ಸಮುದಾಯಕ್ಕೆ, ದೇಶಕ್ಕೆ ಕೀರ್ತಿ ತಂದಿದ್ದಾರೆ. ಮೈಸೂರಿನ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಕ್ರಿಕೆಟ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ವಿವಿಧ ಜಿಲ್ಲೆಗಳ 10ಕ್ಕೂ ಹೆಚ್ಚಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಆಶಾ ಕಿರಣ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್ ಗುರುರಾಜ ಮತ್ತಿತರರು ಹಾಜರಿದ್ದರು.