ಹುಣಸೂರು ತಾಲೂಕು ಮಾದಹಳ್ಳಿ ಉಕ್ಕಿನಕಂತೆ ಮಠದಲ್ಲಿ ನಡೆಯುವ ಗುರುಬೂದಿಸ್ವಾಮಿಗಳ ಆರಾಧನೆ, ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಮಹಾಸಭಾದ ತಾಲೂಕು ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಡಾ.ವೃಷಬೇಂದ್ರಪ್ಪ, ವೀರಭದ್ರಪ್ಪ ಮತ್ತಿತರರು ಬಿಡುಗಡೆಗೊಳಿಸಿದರು. 
ಮೈಸೂರು

ಇಂದು, ನಾಳೆ ಮಾದಹಳ್ಳಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ

ಹುಣಸೂರು: ತಾಲೂಕಿನ ಮಾದಹಳ್ಳಿ ಉಕ್ಕಿನಕಂತೆ ಶ್ರೀಗುರು ಬೂದಿಸ್ವಾಮಿಗಳ 397ನೇ ಆರಾಧನೆ, ನೂತನ ಕಟ್ಟಡ, ನವೀಕೃತ ಗದ್ದುಗೆ, ಸಭಾಂಗಣ ಉದ್ಘಾಟನೆ ಅಂಗವಾಗಿ ಮಾ.6 ಮತ್ತು 7ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ತಿಳಿಸಿದರು.
ಎರಡು ದಿನಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಅವರು, ಗುರು ಬೂದಿಸ್ವಾಮಿಗಳ ಆರಾಧನೆ ಅಂಗವಾಗಿ 63 ಪ್ರಮಥರ ಪೂಜೆ, ಶ್ರೀಮಠದ ನೂತನ ಕಟ್ಟಡ ಹಾಗೂ ನವೀಕೃತ 16 ಗದ್ದಿಗೆಗಳು, ಶತಾಯುಷಿ ಶ್ರೀಸಿದ್ದಲಿಂಗಸ್ವಾಮಿಗಳ ಸಭಾಂಗಣ ಹಾಗೂ ಬಸವ ದ್ವಾರ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ.6ರಂದು ಮುಂಜಾನೆ 5ಕ್ಕೆ ಶ್ರೀವೀರಭದ್ರೇಶ್ವರ ಕೊಂಡೋತ್ಸವ, ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ 8ಕ್ಕೆ ಗುರುಬೂದಿ ಸ್ವಾಮೀಜಿ ಭಾವಚಿತ್ರ ಮೆರವಣಿಗೆ, ಭಜನಾ ಕಾರ್ಯಕ್ರಮವಿರಲಿದೆ. ಸಂಜೆ 7ಕ್ಕೆ ಶಿವದೀಕ್ಷೆ-ಲಿಂಗದೀಕ್ಷೆ ಆಯೋಜಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶ್ರೀಸಿದ್ದಲಿಂಗಸ್ವಾಮಿಗಳ ಸಭಾಂಗಣ ಲೋಕಾರ್ಪಣೆ ಮಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುಬೂದಿಸ್ವಾಮಿ ಗದ್ದುಗೆ ಉದ್ಘಾಟಿಸುವರು. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಗುರುಬೂದಿ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸುವರು. ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್, ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಶಾಸಕ ಎಚ್.ವಿಶ್ವನಾಥ್, ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತಿತರ ಗಣ್ಯರು ಭಾಗವಹಿಸುವರು.
ಮಾ.7ರ ಶನಿವಾರ ಬೆಳಗ್ಗೆ 10.30ಕ್ಕೆ ಶ್ರೀಶಿವರಾತ್ರಿದೇಶಿ ಕೇಂದ್ರ ಸ್ವಾಮಿಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಈಶ್ವರ್ ಬಿ.ಖಂಡ್ರೆ ಬಸವದ್ವಾರ ಉದ್ಘಾಟಿಸುವರು. ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಜಿ.ಟಿ.ದೇವೇಗೌಡ, ಗಣೇಶ್‌ಪ್ರಸಾದ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಎರಡು ದಿನ ಬಸ್ ವ್ಯವಸ್ಥೆ: ಹಿರಿಯ ಮುಖಂಡ ಡಾ.ವೃಷಬೇಂದ್ರಸ್ವಾಮಿ ಮಾತನಾಡಿ, ಎರಡು ದಿನಗಳ ಕಾರ್ಯಕ್ರಮಕ್ಕೆ ಮಾದಹಳ್ಳಿ ಮಠಕ್ಕೆ ಹುಣಸೂರು ಬಸ್ ನಿಲ್ದಾಣದಿಂದ ಗಂಟೆಗೊಮ್ಮೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. 30 ಸಾವಿರಕ್ಕೂ ಹೆಚ್ಚು ಮಂದಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ನೂರಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಬಸವ ಸಮಿತಿ ಅಧ್ಯಕ್ಷ ಕೆ.ಎಚ್.ವೀರಭದ್ರಪ್ಪ, ಗುರುಸ್ವಾಮಿ, ಭಾಗ್ಯಕುಮಾರ್ ಇದ್ದರು.