ನಗರದ ವಿವೇಕ ಯೋಗ ಮಂದಿರದಲ್ಲಿ ಶನಿವಾರ ಬೆಳಗ್ಗೆ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್‌ಗಾಗಿ ನಡೆದ ವಿಶಿಷ್ಟ ಪ್ರಯತ್ನ.
- ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್‌ಗಾಗಿ ವಿಶಿಷ್ಟ ಪ್ರಯತ್ನ
ತಲೆಯ ಮೇಲೆ ನೀರು ತುಂಬಿದ ಕಪ್ ಇಟ್ಟುಕೊಂಡು, ಏಕಾಗ್ರತೆಯಿಂದ 37 ಯೋಗಪಟುಗಳು ಏಕಕಾಲದಲ್ಲಿ ಪ್ರದರ್ಶಿಸಿದ ವಾತಾಯನಾಸನ ಮೈಸೂರಿನಲ್ಲಿ ಗಮನ ಸೆಳೆದರು.
ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್‌ಗಾಗಿ ಈ ವಿಶಿಷ್ಟ ದಾಖಲೆ ಪ್ರಯತ್ನ ಯೋಗದ ಮಹತ್ವದ ಜತೆಗೆ ನೀರಿನ ಸಂರಕ್ಷಣೆಯ ಸಂದೇಶವನ್ನೂ ಸಾರಿತು.
ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಯೋಗ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ನಗರದ ವಿವೇಕ ಯೋಗ ಮಂದಿರದಲ್ಲಿ ಶನಿವಾರ ಬೆಳಗ್ಗೆ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್‌ಗಾಗಿ ವಿಶಿಷ್ಟ ಪ್ರಯತ್ನ ನಡೆದಿದೆ.
ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಮಾರ್ಗಸೂಚಿಗಳಂತೆ ಯೋಗಾಚಾರ್ಯ ಡಾ.ಪಿ.ಎನ್.ಗಣೇಶ್ ಕುಮಾರ್ ನೇತೃತ್ವದಲ್ಲಿ 37 ಯೋಗಪಟುಗಳು ತಲೆಯ ಮೇಲೆ ನೀರು ತುಂಬಿದ ಕಪ್‌ಅನ್ನು ಸಮತೋಲನದಲ್ಲಿರಿಸಿಕೊಂಡು ಒಂದೇ ಸಮಯದಲ್ಲಿ ವಾತಾಯನಾಸನಕ್ಕೆ ತೆರಳಿದರು. ಒಂದು ನಿಮಿಷ ಆಸನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಏಕಾಗ್ರತೆ, ದೈಹಿಕ-ಮಾನಸಿಕ ಸಮತೋಲನ, ಯೋಗ ಕೌಶಲ ಹಾಗೂ ಶಿಸ್ತನ್ನು ಪ್ರದರ್ಶಿಸಿದರು. ಈ ಸಂಬಂಧ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸಲಿದೆ.
ನೀರಿನ ಸಂರಕ್ಷಣೆಯ ಸಂದೇಶ:
ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಜತೆಗೆ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಅಡಿ ಶುದ್ಧ ನೀರು ಮತ್ತು ನೈರ್ಮಲ್ಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಎಷ್ಟು ಮುಖ್ಯವೋ, ಜೀವನಕ್ಕೆ ನೀರು ಕೂಡ ಅಷ್ಟೇ ಅಮೂಲ್ಯ ಎಂಬ ಸಂದೇಶವನ್ನು ವಿಭಿನ್ನ ರೀತಿಯಲ್ಲಿ ಜನರಿಗೆ ತಲುಪಿಸುವ ಪ್ರಯತ್ನ ಇದಾಗಿದೆ.
ನೀರನ್ನು ಉಳಿಸಿ ಭವಿಷ್ಯವನ್ನು ಉಳಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ನೀರಿನ ಕಪ್‌ಅನ್ನು ಪ್ರದರ್ಶನದ ಪ್ರಮುಖ ಭಾಗವನ್ನಾಗಿ ಮಾಡಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಎಲ್ಲ 37 ಯೋಗಪಟುಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರದರ್ಶನಕ್ಕೆ ಅಗತ್ಯವಾದ ಸ್ಥಳ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್‌ನ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಿ ಪ್ರದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಯೋಗಾಚಾರ್ಯ ಡಾ. ಪಿ.ಎನ್.ಗಣೇಶ್ ಕುಮಾರ್ ನೇತೃತ್ವದಲ್ಲಿ ಯೋಗಪಟುಗಳಾದ ಆರ್.ಅಂಕಿತಾ, ಎಂ.ವರ್ಷಾ, ಜಯತು ದಿವಾಕರ, ಟಿ.ಮಯೂರ್, ಎಸ್.ಕೆ.ರಕ್ಷಿತಾ, ಎಂ.ಎ.ದಿವ್ಯಾ, ಬಿ.ಮಾನಸ್ವಿ, ಸಿ.ಎಸ್.ನೀಲಾ ದೇವಿ, ಕೆ.ನೃಪಾಲಿ, ಸಿ.ಕೆ.ಚಾಂದಿನಿ, ಎಸ್.ಉತ್ತಮ್, ಆರ್.ನಕುಲ್, ಎಸ್.ಸುಶ್ಮಿತಾ, ಸಮನ್ಯು ಎಂ.ಗೌಡ, ಹೇಮಂತ್ ಎಚ್.ಸಾಲುಂಕಿ, ಕೆ.ಪವನ್, ಸಿ.ಪಿ.ವರ್ಷಿಣಿ, ಪಿ. ಕೃಷಾ, ಎ.ಧ್ರುವಿತ್, ಮೋಕ್ಷಿತ್, ಶಶಾಂಕ್, ಜಿ.ಸುರಭಿ, ಕುಮಾರಿ ಸಿತಾರಾ, ವಿ.ತನ್ವಿಕಾ, ಎಂ.ಪೂಜಾ, ಭಾಗ್ಯಾ ಪುಟ್ಟಲಿಂಗಪ್ಪ, ಮರಿಯಂ ಮೊಹಮ್ಮದ್ ಅಹ್ಸಾನ್, ಮೈಥಿಲಿ ಸರ್ವೆ, ಅಸ್ಮಿತಾ ದೋಣಿ, ಅದಿತಿ ನಂಬೂದಿರಿ, ಆರವಿ ಖುರಾನಾ, ಚಂದನಾ, ಎಂ.ಉಷಾ, ಆರ್.ಅಚ್ಯುತ್, ಸಿ.ಎನ್.ತ್ರಿಶಿಕಾ ಗೌಡ, ಸೌರಭಾ ಭಾಗವಹಿಸಿದ್ದರು.
ಏಕಕಾಲದಲ್ಲಿ 37 ಜನ ವಾತಾಯನಾಸನ ಮಾಡುವ ಮೂಲಕ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಪ್ರಯತ್ನ ಮಾಡಲಾಗಿದೆ. ಶೀಘ್ರದಲ್ಲೇ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಇದರ ಫಲಿತಾಂಶ ಪ್ರಕಟಿಸಲಿದೆ. ಇದು ದಾಖಲೆ ಆಗುತ್ತದೆ ಎಂಬ ವಿಶ್ವಾಸ ನಮ್ಮಲ್ಲಿದೆ.
— ಯೋಗಾಚಾರ್ಯ ಡಾ. ಪಿ.ಎನ್.ಗಣೇಶ್‌ಕುಮಾರ್, ಹಿರಿಯ ಯೋಗ ಗುರು