ಕಡಿಯಲು ಗುರುತು ಮಾಡಿರುವ ಮರಗಳು 
ಮೈಸೂರು

ಮೈಸೂರು ದಸರಾದಲ್ಲಿ ಕಂಬಳ ಸಿದ್ಧತೆಗಾಗಿ 36 ಮರಗಳ ಹನನ

ಪ್ರಮುಖ ಮುಖ್ಯಾಂಶಗಳು

  • ಮತ್ತೆ 33 ವೃಕ್ಷಗಳನ್ನು ಕಡಿಯಲು ಗುರುತು
  • ಹಲವು ಸಂಘಟನೆಗಳಿಂದ ತೀವ್ರ ವಿರೋಧ
ಮೈಸೂರು: ಕಂಬಳಕ್ಕಾಗಿ ಮರಗಳನ್ನು ಕಡಿಯಲ್ಲ. ಪರಿಸರ ನಾಶ ಮಾಡಲ್ಲ ಎಂದು ಹೇಳುತ್ತಲೇ ಕಂಬಳ ಕ್ರೀಡೆಯ ಸಿದ್ಧತೆಗಾಗಿ ಮರಗಳನ್ನು ಕಡಿದು ಮತ್ತು ಕೆರೆಯನ್ನು ಮುಚ್ಚಿ ಪರಿಸರವನ್ನು ನಾಶ ಮಾಡಲಾಗುತ್ತಿದೆ.
ನಗರದ ಹೊರವಲಯದ ಸಾತಗಳ್ಳಿ ಸರ್ವೇ ನಂಬರ್ 85, 88, 106 ಮತ್ತು 107ರ ಜಾಗದಲ್ಲಿ ಈಗಾಗಲೇ 36 ಮರಗಳನ್ನು ಕಡಿಯಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಯು ಎಫ್‌ಐಆರ್ ದಾಖಲಿಸಿದೆ. ಈಗ ಇದೇ ಜಾಗದಲ್ಲಿ 33 ಮರಗಳನ್ನು ಕಡಿಯಲು ಮರಗಳ ಮೇಲೆ ಗುರುತು ಹಾಕಲಾಗಿದೆ.
ಮುಡಾ ಮಾಲೀಕತ್ವದಲ್ಲಿರುವ ಇದು ಉದ್ಯಾನ, ಬಯಲು ಜಾಗ ಎಂದು ದಾಖಲೆಯಲ್ಲಿ ನಮೂದಾಗಿದೆ. ಈ ಜಾಗದಲ್ಲಿ  ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾಪವನ್ನು ಹಿಂದಿನ ಸಂಸದರು ಮಾಡಿದ್ದರು. 
ಇಲ್ಲಿ ಕ್ರೀಡಾಂಗಣ ಮಾಡಿದರೆ ಇಲ್ಲಿರುವ ಕೆರೆ ಮತ್ತು ಅಪಾರ ಸಂಖ್ಯೆಯ ಮರಗಿಡಗಳು ನಾಶವಾಗುತ್ತವೆ ಎಂದು ಈ ಪ್ರಸ್ತಾಪಕ್ಕೆ ಪರಿಸರ ಸಂಘಟನೆಗಳು ಮತ್ತು ಪರಿಸರ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು.
ಈಗ ಇದೇ ಜಾಗದಲ್ಲಿ ಸೈಕ್ಲಿಂಗ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಉದ್ದೇಶಿಸಿದ್ದು, ಮುಡಾದಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಜಾಗ ವರ್ಗಾವಣೆಗೆ ತೀರ್ಮಾನಿಸಲಾಗಿದೆ. ಆದರೆ, ಮುಡಾದಿಂದ ಕ್ರೀಡಾ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಆಗುವ ಮುನ್ನವೇ ಕ್ರೀಡಾ ಇಲಾಖೆಯ ಅಧಿಕಾರಿಗಳು ಈ ಜಾಗದಲ್ಲಿ ಮರಗಳನ್ನು ಕಡಿದ್ದಾರೆ. 
ಇಲ್ಲಿರುವ ಪೊದೆಗಳು, ಹುಲ್ಲು, ಸಣ್ಣಪುಟ್ಟ ಗಿಡಗಂಟಿಗಳನ್ನು ಮತ್ತು ಇವುಗಳನ್ನು ಆಶ್ರಯಿಸಿದ್ದ ಪ್ರಾಣಿ ಪಕ್ಷಿ, ಹಾವು ಸೇರಿದಂತೆ ಜೀವಸಂಕುಲವನ್ನು ನಾಶ ಮಾಡಲಾಗಿದೆ. ಇದು ಗಂಭೀರ ಸ್ವರೂಪದ ಕರ್ತವ್ಯ ಲೋಪ ಮತ್ತು ಕಾನೂನು ಬಾಹಿರ ಕೃತ್ಯ. 
ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ‘ಪರಿಸರಕ್ಕಾಗಿ ನಾವು’ ಸಂಘಟನೆ, ಟೀಮ್ ಮೈಸೂರು, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ. ಮತ್ತೆ ಇಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು ಅನುಮತಿ ನೀಡಬಾರದು ಎಂದೂ ಆಗ್ರಹಿಸಿದೆ.
ಹಠಕ್ಕೆ ಬಿದ್ದು ಸಿದ್ಧತೆ 
ದಸರಾ ಹಬ್ಬದಲ್ಲಿ ಕಂಬಳ ಕ್ರೀಡೆ ಆಯೋಜನೆ ಬೇಡ ಎಂದು ಹಲವಾರು ಜನಪ್ರತಿನಿಧಿಗಳು, ರೈತ ಸಂಘ, ದಸಂಸ, ಟೀಮ್ ಮೈಸೂರು, ಪ್ರಗತಿಪರ ಮತ್ತು ಕನ್ನಡ ಪರ ಸಂಘಟನೆಗಳು, ಪರಂಪರಿಕ ತಜ್ಞರು, ಹಿರಿಯ ನಾಗರಿಕರು , ಗಣ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ಆದರೂ, ಸರ್ಕಾರವು ಹಠಕ್ಕೆ ಬಿದ್ದು ಕಂಬಳಕ್ಕಾಗಿ ಸಿದ್ಧತೆ ಮಾಡುತ್ತಿದ್ದು, ಮರಗಳ ಹನನಕ್ಕೆ ಮತ್ತು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಆವರಿಸಿಕೊಂಡಿರುವ ಬರಗಾಲ ಮತ್ತು ಇತರ ಹಲವಾರು ಕಾರಣಗಳಿಂದ ಕಂಬಳ ಕ್ರೀಡೆ ಆಯೋಜನೆ ಕೈಬಿಡಬೇಕು ಎಂದು ಜಂಟಿ ಕ್ರಿಯಾ ಸಮಿತಿ ಪರವಾಗಿ ಪರಶುರಾಮೇಗೌಡ ಆಗ್ರಹಿಸಿದ್ದಾರೆ.