ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಹಾಯಕ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಜೆ.ಮಂಜುನಾಥ್ ಮತದಾರರ ಕರಡು ಪ್ರತಿ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಸತೀಶ್ ಪಾಪಣ್ಣ, ಎಚ್.ಪಿ.ಅಮರನಾಥ್, ಎಚ್.ಪಿ.ಸತೀಶ್‌ಕುಮಾರ್ ಇತರರಿದ್ದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಡಿ ಹುಣಸೂರು ವಿಧಾನಸಭಾ ಕ್ಷೇತ್ರದ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದ್ದು 34,537(ಶೇ.13.64)ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹಾಯಕ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಜೆ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ಚುನಾವಣಾ ವಿಭಾಗದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ನೋಂದಾಯಿತ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಕ್ಷೇತ್ರದ ಕರಡು ಪ್ರತಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಸಹಾಯಕ ನೋಂದಣಾಧಿಕಾರಿ ಮಂಜುನಾಥ್, ತಾಲೂಕಿನಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಒಟ್ಟು 2 , 53, 248 ಮತದಾರರಿದ್ದರು. ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ನಂತರ ಶೇ.100 ಮತದಾರರಿಗೆ ಎನ್ಯೂಮರೇಷನ್ ಫಾರ್ಮ್ (ಮತದಾರರ ಗಣತಿ ನಮೂನೆ) ವಿತರಿಸಿ ಶೇ.86.36 ಡಿಜಿಟೈಸೇಷನ್ ಮಾಡಲಾಗಿತ್ತು. ಈ ಪೈಕಿ 34 ಸಾವಿರಕ್ಕೂ ಹೆಚ್ಚು ಜನರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೈರಾದವರು 4,562 ಮತದಾರರು. ಮೃತಪಟ್ಟವರು 11,989, ಶಾಶ್ವತವಾಗಿ ವರ್ಗಾವಣೆಗೊಂಡವರ ಸಂಖ್ಯೆ 13,342, ಎರಡು ಕಡೆ ನೋಂದಾಯಿತಗೊಂಡವರು 4,568 ಹಾಗೂ ಇತರೆ 76 ಜನರು ಇದ್ದಾರೆ. ಪ್ರಸ್ತುತ ಕರಡು ಪ್ರತಿಯಲ್ಲಿ 2, 18, 711 ಮತದಾರರು ಉಳಿದಿದ್ದಾರೆ. ಈ ಪೈಕಿ ಪುರುಷ ಮತದಾರರ ಸಂಖ್ಯೆ 1,07,990, ಹಾಗೂ ಮಹಿಳಾ ಮತದಾರರು 1,10,709 ಹಾಗೂ 12 ಮಂದಿ ತೃತೀಯಲಿಂಗಿಗಳು ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಈವರೆಗೆ 274 ಮತಗಟ್ಟೆಗಳಿದ್ದವು. 1200ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೀಗ ಹುಣಸೂರು ವಿಧಾಸಭಾ ಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳು ಸ್ಥಾಪಿಸಲಾಗಿದೆ. ತಾಲೂಕಿನ ಶಬ್ಬೀರ್ ನಗರ, ಕರಣಕುಪ್ಪೆ, ಮುತ್ತುರಾಯನಹೊಸಳ್ಳಿ ಕಾವಲ್, ಯಶೋಧರಪುರ, ಚಲ್ಲಹಳ್ಳಿ, ಚಿಕ್ಕಹುಣಸೂರು, ಕಾಮಗೌಡನಹಳ್ಳಿ, ಹೆಗ್ಗಂದೂರು, ಉಮ್ಮತ್ತೂರು, ಧರ್ಮಾಪುರ ಮತ್ತು ನೇರಳಕುಪ್ಪೆ (ಒಟ್ಟು 11)ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಹಾಲಿ ಕರಡು ಪ್ರತಿಯಲ್ಲಿ ಎಸ್‌ಐಆರ್ ಆರಂಭಗೊಂಡ ವೇಳೆ ಮ್ಯಾಪಿಂಗ್ ಪ್ರಕ್ರಿಯೆ ಆಗದೆ ಉಳಿದಿರುವ 2,978 ಮತದಾರರು ಮತ್ತು ಮತದಾರರು ನೀಡಿರುವ ಎನ್ಯೂಮರೇಷನ್ ಫಾರ್ಮ್‌ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್‌ಗಳು, ಸಮರ್ಪಕವಾಗಿ ಭರ್ತಿ ಮಾಡದಿರುವುದು, ಅವಶ್ಯ ಮಾಹಿತಿಗಳ ಕೊರತೆ ಮುಂತಾದ ತಪ್ಪುಗಳನ್ನು ಹೊಂದಿರುವ ಫಾರ್ಮ್‌ಗಳ ಮತದಾರರಿಗೆ ಆಯೋಗದ ವತಿಯಿಂದ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಕೋರಲಾಗುವುದು. 8,121 ಮತದಾರರಿಗೆ ನೋಟಿಸ್ ನೀಡಬೇಕಿದ್ದು ವಿಚಾರಣೆ ಸುಲಲಿತಗೊಳಿಸಲು ಹೆಚ್ಚುವರಿಯಾಗಿ 11ಎಇಆರ್‌ಒಗಳನ್ನು ನೇಮಿಸಿಕೊಂಡು ಗ್ರಾ.ಪಂ.ಮಟ್ಟದಲ್ಲೇ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಹೆಚ್ಚಿನ ಆಸ್ಥೆ ವಹಿಸಿ ಆಯೋಗಕ್ಕೆ ಸಹಕಾರ ನೀಡಿದಲ್ಲಿ ಕೈಬಿಟ್ಟುಹೋಗಬಹುದಾದ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಬಹುದು. ಇದನ್ನು ಹೊರತುಪಡಿಸಿ ಕರಡು ಪ್ರತಿಯಲ್ಲಿ ಲೋಪದೋಷಗಳಿದ್ದರೆ ಮತದಾರರು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ. ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿದರೆ ವಿಚಾರಣೆ ನಡೆಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ಮೂರು ವರ್ಗಗಳಿವೆ. 1987ಕ್ಕಿಂತ ಮುನ್ನ ಜನಿಸಿದ್ದವರು, ಜನ್ಮ ದಿನಾಂಕ ತಿಳಿಸುವ ಯಾವುದಾದರೊಂದು ದಾಖಲೆಗಳನ್ನು ನೀಡಬೇಕು. 1987ರ ಜು.1ರಿಂದ 2004ರ ಡಿ.2ರೊಳಗೆ ಜನಿಸಿದವರು ತಮ್ಮ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕದ ದಾಖಲೆ ಮತ್ತು ತಂದೆ ಅಥವಾ ತಾಯಿ ದಾಖಲೆ ನೀಡಬೇಕು. 2004.ಡಿ.2ರ ನಂತರ ಜನಿಸಿದವರು ತಂದೆ ಅಥವಾ ತಾಯಿಗೆ ಸಂಬಂಧಿಸಿದ ಜನ್ಮದಿನಾಂಕ ಋಜುವಾತು ಪಡಿಸುವ ದಾಖಲೆ ಮತ್ತು ತಮ್ಮ ಸ್ವಂತ ದಾಖಲೆಗಳನ್ನು ನೀಡಬೇಕು ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಬಿಎಲ್‌ಎ 1 ಸತೀಶ್ ಪಾಪಣ್ಣ, ಪ್ರಧಾನ ಕಾರ್ಯದರ್ಶಿ ಸತೀಶ್‌ಕುಮಾರ್, ಕಾಂಗ್ರೆಸ್ ಪಕ್ಷದ ಬಿಎಲ್‌ಎ1 ಎಚ್.ಪಿ.ಅಮರನಾಥ್, ರಾಘು, ಕುಮಾರ್, ಧರ್ಮಾಪುರ ಕಾಳಪ್ಪ, ಚುನಾವಣಾ ಶಿರಸ್ತೇದಾರ್ ಎ.ಪ್ರಕಾಶ್, ಗುರುಮೂರ್ತಿ ಹಾಜರಿದ್ದರು.