ತಿ.ನರಸೀಪುರ ತಾಲೂಕು ಕಚೇರಿಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿಯ ಪ್ರಕಟಣೆಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ಟಿ.ಜಿ.ಸರೇಶಾಚಾರ್ ಸಭೆ ನಡೆಸಿದರು. ಪಿ.ಎಸ್.ಮಹೇಶ್, ಬಿ.ಆರ್.ಪುಟ್ಟಸ್ವಾಮಿ, ಸಿ.ಬಿ ಹುಂಡಿ ಚಿನ್ನಸ್ವಾಮಿ, ಲಕ್ಷ್ಮಣ, ಕಲಿಯೂರು ಶಿವಣ್ಣ ಇದ್ದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಮತದಾರರ ಪಟ್ಟಿಯ ಪ್ರಕಟಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 2,12,752 ಮತದಾರರಿದ್ದು, ಪರಿಶೀಲನಾ ಪ್ರಕ್ರಿಯೆಯ ಬಳಿಕ 31,436 ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದೀಗ 1,81,316 ಮತದಾರರನ್ನು ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ಕೈಬಿಡಲಾದ 31,436 ಮತದಾರರಲ್ಲಿ 2,021 ಮಂದಿ ಗೈರು ಹಾಜರಿ, 14,723 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 11,156 ಮಂದಿ ಮೃತಪಟ್ಟವರು, 3,493 ಮಂದಿ ದ್ವಿಪ್ರತಿ ಮತದಾರರು ಹಾಗೂ 43 ಮಂದಿ ಇತರ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.
ಪಟ್ಟಿಯಿಂದ ಕೈಬಿಡಲಾದವರ ವಿವರಗಳನ್ನು ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಒದಗಿಸಲಾಗಿದೆ. ಅಲ್ಲದೆ, ಕ್ಷೇತ್ರದಲ್ಲಿ 6,168 ಅನಾಮಲಿ ಮತದಾರರು ಹಾಗೂ 3,633 ನೋ-ಮ್ಯಾಪಿಂಗ್ ಮತದಾರರು ಸೇರಿದಂತೆ ಒಟ್ಟು 9,801 ಮಂದಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವಿಚಾರಣಾ ಕೇಂದ್ರಗಳನ್ನು ಆರಂಭಿಸಿ ಪರಿಶೀಲನೆ ನಡೆಸಲಾಗುವುದು. ಈ ಪ್ರಕ್ರಿಯೆಗೆ 13 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಅರ್ಹ ಮತದಾರರು ಜನ್ಮ ದಿನಾಂಕ ಹಾಗೂ ಸ್ಥಳ ದೃಢೀಕರಣಕ್ಕಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸೇರಿದಂತೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆ ಸಲ್ಲಿಸಬಹುದು. ಆಧಾರ್ ಅನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಗುರುತಿನ ದಾಖಲೆಯಾಗಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಂಡು, ಯಾವುದೇ ಆಕ್ಷೇಪಣೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ನಿಗದಿತ ಅವಧಿಯಲ್ಲಿ ಅರ್ಜಿಯೊಂದಿಗೆ ಜಿಲ್ಲಾ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಮತದಾರರ ನೋಂದಣಿ, ಹೆಸರು ಪರಿಶೀಲನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಚುನಾವಣಾ ಆಯೋಗದ ಅಥವಾ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅಧಿಕೃತ ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಎಸ್‌ಐಆರ್ ವಿಶೇಷಾಧಿಕಾರಿ ಪಿ.ಎಸ್.ಮಹೇಶ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಿ.ಆರ್.ಪುಟ್ಟಸ್ವಾಮಿ, ಜಿಲ್ಲಾ ಉಸ್ತುವಾರಿ ಬಿ.ಮಹದೇವಸ್ವಾಮಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಬಿಜೆಪಿ ಮಾಜಿ ಅಧ್ಯಕ್ಷ ಎನ್.ಲೋಕೇಶ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಮುಖಂಡರಾದ ತಿರುಮಕೂಡಲು ಜಯರಾಂ, ಕನ್ನಹಳ್ಳಿ ಲಕ್ಷ್ಮಣ, ಕಲಿಯೂರು ಶಿವಣ್ಣ ಇದ್ದರು.