ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ  
ಮೈಸೂರು

ರಾಜ್ಯದಲ್ಲಿ 31 ಹೊಸ ರೈಲು ಮಾರ್ಗ ಯೋಜನೆ ಪ್ರಗತಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ
  • ವಿಂಡೋ ಟ್ರೈಲಿಂಗ್ ತಪಾಸಣೆ
ಮೈಸೂರು: ರಾಜ್ಯದಲ್ಲಿ 3,840 ಕಿ.ಮೀ. ಉದ್ದದ 31 ಹೊಸ ರೈಲು ಮಾರ್ಗ ಯೋಜನೆಗಳು ಪ್ರಗತಿಯಲ್ಲಿವೆ. 2014ರಿಂದ ಈ ವರೆಗೆ 1,750 ಕಿ.ಮೀ. ಹೊಸ ಹಳಿಗಳನ್ನು ಹಾಕಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೆಎಸ್‌ಆರ್ ಬೆಂಗಳೂರು, ಮಂಡ್ಯ, ಮೈಸೂರು ರೈಲ್ವೆ ವಿಭಾಗದಲ್ಲಿ ‘ವಿಂಡೋ ಟ್ರೈಲಿಂಗ್’ ತಪಾಸಣೆ ನಡೆಸಿದರು.
ಈ ವೇಳೆ ಬೆಂಗಳೂರು-ಮೈಸೂರು ವಿಭಾಗದ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ, ಕಾರ್ಯಾಚರಣೆ ಮತ್ತು ಸುರಕ್ಷತಾ ಅಂಶ ಪರಿಶೀಲಿಸಿದರು. ಬಳಿಕ ಮೈಸೂರಿನ ಡಿಆರ್‌ಎಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
2026-27ರ ಹಣಕಾಸು ವರ್ಷದಲ್ಲಿ ದೇಶಾದ್ಯಂತ ರೈಲ್ವೆ ಅಭಿವೃದ್ಧಿಗೆ 2,93,030 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು 2009-2014ರ ಅವಧಿಯ ಸರಾಸರಿ ಹಂಚಿಕೆಗಿಂತ ಸುಮಾರು 9 ಪಟ್ಟು ಹೆಚ್ಚಾಗಿದೆ. ಕರ್ನಾಟಕಕ್ಕೆ 2026-27ರಲ್ಲಿ 7,748 ಕೋಟಿ ರೂ. ಹಂಚಿಕೆಯಾಗಿದೆ. ಕಳೆದ ವರ್ಷ 7,564 ಕೋಟಿ ರೂ. ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.
"

ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಗರಿಷ್ಠ ವೇಗವನ್ನು 110ರಿಂದ 135 ಕಿ.ಮೀ.ಗೆ ಹೆಚ್ಚಿಸಿದ್ದು, ಇದರಿಂದ ಈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಒಂದು ಗಂಟೆಗೆ ತಗ್ಗಿದೆ. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರಿನಂತಹ ನಗರಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ರಾಜಧಾನಿಯಿಂದ ಮೈಸೂರಿಗೆ ಸದ್ಯದಲ್ಲೇ ಇನ್ನೂ ಎರಡು ಮೆಮು ರೈಲುಗಳು ಸಂಚಾರ ಮಾಡಲಿವೆ

ರಾಜ್ಯದಲ್ಲಿ ಪ್ರಸ್ತುತ 52,950 ಕೋಟಿ ರೂ. ಮೌಲ್ಯದ ರೈಲ್ವೆ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. 1,981 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ 61 ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಮರುಅಭಿವೃದ್ಧಿ ಮಾಡಲಾಗುತ್ತಿದೆ.
ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳನ್ನು ಬಹು ಮಾದರಿ ಸಂಯೋಜನೆಯೊಂದಿಗೆ ಆಧುನೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ 55 ಕಿಮೀ ಮಾರ್ಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ನೈಋತ್ಯ ರೈಲ್ವೆಯ ಶೇ.97ರಷ್ಟು ಮಾರ್ಗ ವಿದ್ಯುದ್ದೀಕರಣಗೊಂಡಿದೆ. 2014ರಿಂದ ಕರ್ನಾಟಕದಲ್ಲಿ ಸುಮಾರು 3,742 ಕಿಮೀ ಮಾರ್ಗ ವಿದ್ಯುದ್ದೀಕರಿಸಲಾಗಿದೆ ಎಂದು ಅಂಕಿ-ಅಂಶಗಳೊಂದಿಗೆ ತಿಳಿಸಿದರು.
ರೈಲುಗಳ ಡಿಕ್ಕಿ ತಪ್ಪಿಸುವ ಸಲುವಾಗಿ ‘ಕವಚ’ ತಂತ್ರಜ್ಞಾನವನ್ನು ನೈಋತ್ಯ ರೈಲ್ವೆಯಲ್ಲಿ ಜಾರಿಗೊಳಿಸಲಾಗುತ್ತಿದೆ. 2014ರಿಂದ ರಾಜ್ಯದಲ್ಲಿ 707 ಮೇಲ್ಸೇತುವೆ(ಆರ್‌ಒಬಿ) ಮತ್ತು ಕೆಳಸೇತುವೆಗಳು(ಆರ್‌ಯುಬಿ) ನಿರ್ಮಿಸಲಾಗಿದ್ದು, ಬೆಂಗಳೂರು-ಮೈಸೂರು ಮಾರ್ಗದಲ್ಲಿ 5 ರಸ್ತೆ ಮೇಲ್ಸೇತುವೆ ಮತ್ತು 1 ರಸ್ತೆ ಕೆಳಸೇತುವೆ ಮಂಜೂರಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಚನ್ನಪಟ್ಟಣ ಯಾರ್ಡ್‌ನಲ್ಲಿರುವ ಆರ್‌ಒಬಿಯನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಶ್ರೀರಂಗಪಟ್ಟಣ-ಪಾಂಡವಪುರ ಆರ್‌ಒಬಿಯ ಕೆಲಸವು ಪ್ರಸ್ತುತ 41.14 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಷ್ಠಾನದಲ್ಲಿದೆ. ನಾಯಂಡಹಳ್ಳಿ-ಕೆಂಗೇರಿಯಲ್ಲಿ 33.65 ಕೋಟಿ ರೂ. ಮೌಲ್ಯದ ಆರ್‌ಯುಬಿ ಮತ್ತು ಶೆಟ್ಟಿಹಳ್ಳಿ-ನಿಡಗಟ್ಟದಲ್ಲಿ ಆರ್‌ಒಬಿಗಳು ಡಿಪಿಆರ್ ಅನುಮೋದನೆ ಹಂತದಲ್ಲಿವೆ.
ಇದಲ್ಲದೆ, ಬೆಂಗಳೂರು-ಮೈಸೂರು ವಿಭಾಗದ ಚತುಷ್ಪಥ ಮಾರ್ಗಕ್ಕಾಗಿ ಸಮೀಕ್ಷೆಗಳು ಪೂರ್ಣಗೊಂಡಿವೆ ಮತ್ತು ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಕೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.