ಚಿಣ್ಣರ ಮೇಳದ ಪ್ರವೇಶ ಅರ್ಜಿ ಪಡೆಯಲು ಭಾನುವಾರ ರಂಗಾಯಣದಲ್ಲಿ ಸರದಿಯಲ್ಲಿ ನಿಂತಿರುವ ಪಾಲಕರು.
- ಚಿಣ್ಣರ ಮೇಳದ ಪ್ರವೇಶಕ್ಕಾಗಿ ಪಾಲಕರ ಆಸಕ್ತಿ
- ಮೈಸೂರು ರಂಗಾಯಣದಲ್ಲಿ ಏ.14ರಿಂದ ಮೇ 10ರವರೆಗೆ ಮಕ್ಕಳ ರಂಗ ತರಬೇತಿ ಶಿಬಿರ
ಮೈಸೂರು: ಚಿಣ್ಣರ ಮೇಳದ ಪ್ರವೇಶಕ್ಕಾಗಿ 250 ಅರ್ಜಿಗಳು ಭಾನುವಾರ ಬೆಳಗ್ಗೆ ಕೇವಲ ಒಂದೂವರೆ ತಾಸಿನಲ್ಲೇ ಖಾಲಿಯಾದವು.
ಮೈಸೂರು ರಂಗಾಯಣ ಆಯೋಜಿಸುವ ಚಿಣ್ಣರ ಮೇಳದ ಬೇಡಿಕೆಯನ್ನು ಇದು ಸಂಕೇತಿಸುತ್ತದೆ. ಏ.14ರಿಂದ ಮೇ 10ರವರೆಗೆ ಮಕ್ಕಳ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. 7 ವರ್ಷಗಳು ತುಂಬಿದ ಮತ್ತು 15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಿಕೊಡಲಾಗಿದೆ.
ಮೇಳ ಪ್ರವೇಶಕ್ಕಾಗಿ ಅರ್ಜಿ ಪಡೆದುಕೊಳ್ಳಲು ಪಾಲಕರು ರಾತ್ರಿಯಿಂದಲ್ಲೇ ಕಾದು ನಿಂತು ಅರ್ಜಿಯನ್ನು ತಮ್ಮದಾಗಿಸಿಕೊಂಡರು. ಬೆಳಗ್ಗೆ 10 ಗಂಟೆಯಿಂದಲೇ ರಂಗಾಯಣದ ವತಿಯಿಂದ ಅರ್ಜಿ ವಿತರಣೆ ಆರಂಭಿಸಿತ್ತು.
11.30ಗಂಟೆ ಹೊತ್ತಿಗೆ ಎಲ್ಲ ಅರ್ಜಿಗಳು ಖಾಲಿಯಾದವು. ಪ್ರತಿ ವರ್ಷವೂ ರಂಗಾಯಣದ ಚಿಣ್ಣರ ಮೇಳಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ನಿಗದಿತ ಅರ್ಜಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿ ಜಮಾವಣೆಗೊಳ್ಳುತ್ತಿದ್ದರು. ಈ ಬಾರಿ 250 ಅರ್ಜಿಗೆ ತಕ್ಕಂತೆ ಪಾಲಕರ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಅರ್ಜಿ ಶುಲ್ಕ 100 ರೂ. ನಿಗದಿಪಡಿಸಿದ್ದು, ಮಗುವೊಂದಕ್ಕೆ 4 ಸಾವಿರ ರೂ. ಡಿಡಿ ಜತೆಗೆ ಅರ್ಜಿ ಪಡೆದ 100 ರೂ. ರಸೀದಿ ಸಹಿತ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗಿದೆ.
ಏ.9ರ ಸಂಜೆ 5ರೊಳಗೆ ರಂಗಾಯಣ ಕಚೇರಿಗೆ ಇದನ್ನು ನೀಡಬೇಕಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಪ್ರವೇಶ ಶುಲ್ಕ ಹೆಚ್ಚಳವಾಗಿದೆ.