- ಪ್ರತಾಪಸಿಂಹ ಆರೋಪ ಕಾಂಗ್ರೆಸ್‌ನಿಂದ ಬಿಎಲ್‌ಒಗಳ ಮೇಲೆ ಒತ್ತಡ
ಕಾಂಗ್ರೆಸ್ ಕೇವಲ ಮತದಾರರನ್ನು ನಂಬಿಕೊಂಡೇ ಅಧಿಕಾರ ನಡೆಸುತ್ತಿದ್ದು, ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ಖಾಲಿ ಸೈಟ್‌ನಲ್ಲೂ 20 ಮತದಾರರು ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಬಿಎಲ್‌ಒಗಳನ್ನು ಮಸೀದಿ ಹಾಗೂ ಚೌಲ್ಟ್ರಿಗಳಿಗೆ ಕರೆಸಿಕೊಂಡು ಅರ್ಜಿ ತುಂಬಿಸುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳ ಮೇಲೆ ಸರ್ಕಾರದ ಒತ್ತಡವಿದ್ದು, ಕಾಂಗ್ರೆಸ್ ಪುಡಾರಿಗಳ ಬೆದರಿಕೆಗೆ ಅಧಿಕಾರಿಗಳು ಹೆದರುತ್ತಿದ್ದಾರೆ. ಎಸ್‌ಐಆರ್ ಬಗ್ಗೆ ರಾಜ್ಯದ ಗೃಹ ಸಚಿವರಿಗೆ ತಿಳಿದಿಲ್ಲ ಎಂದರೆ ಅದು ಅವರ ವಿದ್ಯಾರ್ಹತೆಗೆ ಮೀರಿದ ವಿಚಾರ ಅಷ್ಟೇ ಎಂದು ಲೇವಡಿ ಮಾಡಿದರು.
ಕೋವಿಡ್‌ನಿಂದಾಗಿ ಜನಗಣತಿ ವಿಳಂಬವಾಗಿರುವ ಕಾರಣ, ಮತಪಟ್ಟಿಯನ್ನು ದೋಷಮುಕ್ತಗೊಳಿಸಲು ಕೇಂದ್ರ ಸರ್ಕಾರ ಈ ವಿಶೇಷ ಪರಿಷ್ಕರಣೆ ತಂದಿದೆ. ನಿಯಮದ ಪ್ರಕಾರ ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ಸತ್ತವರು, ವಲಸೆ ಹೋದವರನ್ನು ಪತ್ತೆಹಚ್ಚಿ ಮನೆ ಯಜಮಾನನ ಸಹಿ ಪಡೆಯಬೇಕು. ಆದರೆ, ಕಾಂಗ್ರೆಸ್‌ನವರು ಬಿಎಲ್‌ಒಗಳನ್ನು ಮಸೀದಿಗಳಿಗೆ ಕರೆಸಿಕೊಂಡು ಗುಂಪಾಗಿ ಅರ್ಜಿ ತುಂಬಿಸುತ್ತಿದ್ದಾರೆ. ಹಿಂದೂಗಳ ಕಾಲನಿಯಲ್ಲಿ ಎಲ್ಲಾದರೂ ದೇವಸ್ಥಾನದ ಹತ್ತಿರ ಈ ರೀತಿ ಅರ್ಜಿ ಕೊಡುವುದನ್ನು ನೋಡಿದ್ದೀರಾ? ಮುಸ್ಲಿಂ ಕಾಲನಿಗಳಲ್ಲಿ ಮಾತ್ರ ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನಿಸಿದರು.
ನಕಲಿ ಮತ ಇರುವುದು ಮುಸ್ಲಿಂರಲ್ಲಿ ಮಾತ್ರ. ಇದು ಹೋದರೆ ಮುಂದಿನ ಚುನಾವಣೆಗೆ ಕಷ್ಟ ಎಂದು ಗೊತ್ತಾಗಿದೆ. ಸತ್ತವರು ಮುಂದಿನ ಚುನಾವಣೆಗೆ ಬಂದು ಮತ ಹಾಕಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶ. ಬೇರೆ ಬೇರೆ ಜಿಲ್ಲೆಯಿಂದ ಇಲ್ಲಿಗೆ ಬಂದು ವಾಸ ಮಾಡುತ್ತಿರುವವರು ಮೈಸೂರಿನಲ್ಲೇ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದರು.
ನೂರು ಮತಗಳ ಬಂದಿಲ್ಲ:
ಎಸ್‌ಐಆರ್ ಪ್ರಕ್ರಿಯೆ ಲೋಪಗಳ ವಿರುದ್ಧ ಧ್ವನಿ ಎತ್ತಿದ್ದ ಸಂಸದ ಯದುವೀರ್ ಒಡೆಯರ್ ಅವರಿಗೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಿಡಿಕಾರಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯದ ಬೂತ್‌ಗಳಲ್ಲಿ ಬಿಜೆಪಿಗೆ ಕನಿಷ್ಠ ನೂರು ಮತಗಳೂ ಬಂದಿಲ್ಲ. ಕಾಂಗ್ರೆಸ್‌ಗೆ ಒಂದೂವರೆ ಲಕ್ಷ ಮತ ಹಾಕಿ, ಈಗ ನಾವು ಯದುವೀರ್‌ಗೆ ಮತ ಹಾಕಿಲ್ಲವೇ ಎಂದು ಸುಳ್ಳು ಹೇಳುವುದನ್ನು ಬಿಡಲಿ ಎಂದು ಪ್ರತಾಪ್ ಸಿಂಹ ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಮನವಿ: ಬಿಎಲ್‌ಒಗಳು ನಿವೃತ್ತಿಯ ಅಂಚಿನಲ್ಲಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣವೇ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಮನೆ ಮನೆಗೆ ತೆರಳಿ ಮ್ಯಾಪಿಂಗ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ ಪ್ರತಾಪ್ ಸಿಂಹ ಅವರು, ಹೊರ ಜಿಲ್ಲೆಗಳಿಂದ ಬಂದು ಮೈಸೂರಿನಲ್ಲಿ ನೆಲೆಸಿರುವ ನಿವಾಸಿಗಳು ಇಲ್ಲೇ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.