ಭಕ್ತರಿಗೆ ಉಚಿತವಾಗಿ ವಿತರಿಸಲು ಸಿದ್ದಗೊಂಡಿರುವ ಲಾಡು ಪ್ರಸಾದ. ಪ್ರೊ.ಭಾಷ್ಯಂ ಸ್ವಾಮಿ, ಎನ್.ಶ್ರೀನಿವಾಸನ್, ಗೋವಿಂದ ರಾಜ್, ಲಕ್ಷ್ಮೀ ರಾಜ್ ಕುಮಾರ್ ಇತರರಿದ್ದರು. 
ಮೈಸೂರು

ಹೊಸ ವರ್ಷಾರಂಭ ದಿನ 2 ಲಕ್ಷ ಲಾಡು ವಿತರಣೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮಿ ಮಾಹಿತಿ
  • ಜ.1ರಂದು ಭಕ್ತರಿಗೆ ಉಚಿತವಾಗಿ ನೀಡಲು ಸಿದ್ಧತೆ
  • ವಿಶೇಷ ತೋಮಾಲೆ, ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ
ಮೈಸೂರು: ವಿಜಯನಗರದ ಎರಡನೇ ಹಂತದ ಪ್ರಸಿದ್ಧ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದಂದು ಎರಡು ಲಕ್ಷ ತಿರುಪತಿ ಮಾದರಿಯ ಲಾಡುಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ದೇವಾಲಯದ ಸಂಸ್ಥಾಪಕ ನಾಡೋಜ ಪ್ರೊ.ಭಾಷ್ಯಂ ಸ್ವಾಮಿ ಹೇಳಿದರು.
ನೂತನ ಕ್ರೈಸ್ತ ವರ್ಷಾರಂಭದ ದಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಲಾಡುಗಳನ್ನು ವಿತರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.1ರಂದು ಬೆಳಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಯೋಗ ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ‘ತೋಮಾಲೆ’ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ‘ಸಹಸ್ರನಾಮರ್ಚನೆ’ ಮತ್ತು ದೇವಾಲಯದ ಉತ್ಸವ ಮೂರ್ತಿ ಶ್ರೀ ರಂಗನಾಥ ಸ್ವಾಮಿಗೆ ದೇವಾಲಯದ ಆವರಣದಲ್ಲಿ ‘ಏಕಾದಶ ಪ್ರಾಕಾರೋತ್ಸವ’ ಹಾಗೂ ಐವತ್ತು ಕ್ವಿಂಟಾಲ್ ಪುಳಿಯೋಗರೆ ನೈವೇದ್ಯ ಮಾಡಲಾಗುವುದು. ಈ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳಿಗೆ ಲಾಡು ವಿತರಿಸಲಾಗುವುದು ಎಂದರು.
1994ರಿಂದ ಪ್ರತೀ ವರ್ಷ ಒಂದು ಸಾವಿರ ಲಾಡು ವಿತರಣೆ ಕಾರ್ಯ ಪ್ರಾರಂಭವಾಗಿದೆ. ಡಾ.ರಾಜ್‌ಕುಮಾರ್ ಅವರು ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ನೀಡಿದ ಸಲಹೆ ಮೇರೆಗೆ ಲಾಡು ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಡಾ.ರಾಜ್ ಕುಮಾರ್ ಮತ್ತು ಅವರ ಎಲ್ಲ ಕುಟುಂಬ ಸದಸ್ಯರ ಮನೆಗೆ ಲಾಡು ಪ್ರಸಾದ ವಿತರಿಸಲಾಗುತ್ತಿದೆ ಎಂದರು.
ಪ್ರಸಾದವನ್ನು ವಿಶೇಷವಾಗಿ 100 ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ. 150 ಗ್ರಾಂ ತೂಕದ 2 ಲಕ್ಷ ಲಾಡು ತಯಾರಿಸಲಾಗುತ್ತಿದೆ. ಜತೆಗೆ 2 ಕೆ.ಜಿ., 10 ಕೆ.ಜಿ. ತೂಕದ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಲಾಡುಗಳನ್ನು ತಯಾರಿಸಲು 100 ಕ್ವಿಂಟಾಲ್ ಕಡ್ಲೆ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10,000 ಲೀಟರ್ ಖಾದ್ಯ ತೈಲ, 500 ಕೆ.ಜಿ. ಗೋಡಂಬಿ, 500 ಕೆಜಿ ಒಣದ್ರಾಕ್ಷಿ, 250 ಕೆ.ಜಿ. ಬಾದಾಮಿ, 1000 ಕೆಜಿ ಡೈಮಂಡ್ ಸಕ್ಕರೆ, 2000 ಕೆಜಿ ಬೂರಾ ಸಕ್ಕರೆ, 50 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 50 ಕೆಜಿ ಜಾಕಾಯಿ ಮತ್ತು ಜಾಪಾತ್ರೆ, 50 ಕೆಜಿ ಪಚ್ಚ ಕರ್ಪೂರ, 200 ಕೆಜಿ ಲವಂಗವನ್ನು ಬಳಸಲಾಗಿದೆ ಎಂದು ವಿವರಿಸಿದರು.
ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾತನಾಡಿ, ಲೋಕ ಕಲ್ಯಾಣಾರ್ಥ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲ ಜನರ ಒಳಿತಿಗಾಗಿ ಪ್ರಾರ್ಥಿಸಿ ಲಾಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ರಾಜ್‌ಕುಮಾರ್ ಕುಟುಂಬದ ಗೋವಿಂದ ರಾಜ್, ಲಕ್ಷ್ಮೀ ರಾಜ್ ಕುಮಾರ್ ಇತರರಿದ್ದರು.