ರೈತರ ಆತ್ಮಹತ್ಯೆ ಪ್ರಕರಣ 
ಮೈಸೂರು

ಸಾಲ ಹೊರೆಯಿಂದ 190 ರೈತರು ಆತ್ಮಹತ್ಯೆಗೆ ಶರಣು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • 3 ವರ್ಷದಲ್ಲಿ 190 ರೈತರ ಆತ್ಮಹತ್ಯೆ
  • ರಾಜ್ಯದಲ್ಲೇ 5ನೇ ಸ್ಥಾನದಲ್ಲಿದೆ ಮೈಸೂರು ಜಿಲ್ಲೆ
  • ಸಾಲದ ಹೊರೆ, ಬೆಳೆಹಾನಿ, ಬೆಲೆ ಕುಸಿತವೇ ಮುಖ್ಯ ಕಾರಣ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕೃಷಿ ಸಂಕಷ್ಟದಿಂದ ನಲುಗಿಹೋಗಿರುವ ರೈತರ ಜೀವನವೇನು ಸುಧಾರಣೆಯಾಗುತ್ತಿಲ್ಲ. ಇದಕ್ಕೆ ಸಾಕ್ಷೀಕರಿಸುತ್ತವೆ ರೈತರ ಆತ್ಮಹತ್ಯೆ ಪ್ರಕರಣಗಳು. ‘ಮುಂದುವರಿದ ಜಿಲ್ಲೆ’ ಎಂದಿನಿಸಿಕೊಂಡಿರುವ ಮೈಸೂರಿನಲ್ಲಿ ಕಳೆದ ಮೂರು ವರ್ಷದಲ್ಲಿ ಸಾಲದ ಹೊರೆಯಿಂದಾಗಿ 190 ಕೃಷಿಕರು ಸಾವಿಗೆ ಶರಣಾಗಿದ್ದಾರೆ.
ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂಬುದು ಆಶಾದಾಯಕ ಸಂಗತಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಕಳೆದ ಮೂರು ವರ್ಷದಲ್ಲಿ ಕೃಷಿ ಸಮಸ್ಯೆಗಳಿಂದ ಬೇಸತ್ತ 190 ರೈತರು ಜೀವತ್ಯಾಗದೊಂದಿಗೆ ತಮ್ಮ ಜೀವನಕ್ಕೆ ಸ್ವಯಂ ಪೂರ್ಣ ಇಟ್ಟುಕೊಂಡಿದ್ದಾರೆ. ಈ ಪೈಕಿ 163 ಮೃತ ರೈತರ ಕುಟುಂಬಗಳಿಗೆ ಪರಿಹಾರ ತಲುಪಿಸಲಾಗಿದೆ. 27 ರೈತರ ಆತ್ಮಹತ್ಯೆ ಪ್ರಕರಣಗಳನ್ನು ವಿವಿಧ ಕಾರಣಗಳಿಂದ ತಿರಸ್ಕಾರ ಮಾಡಿದ್ದು, ಪರಿಹಾರ ಪಡೆದಕೊಳ್ಳುವಲ್ಲಿ ಅನರ್ಹಗೊಂಡಿದ್ದಾರೆ.
2023-24ನೇ ಸಾಲಿನಲ್ಲಿ 77 ರೈತರು ಆತ್ಮಹತ್ಯೆ ಶರಣಾಗಿದ್ದಾರೆ. ಈ ಪೈಕಿ 9 ಪ್ರಕರಣಗಳು ತಿರಸ್ಕೃತಗೊಂಡಿದ್ದು, 68 ಪ್ರಕರಣಗಳು ಪರಿಹಾರಕ್ಕೆ ಅರ್ಹವಾಗಿವೆ. 2024-25ನೇ ವರ್ಷದಲ್ಲಿ 81 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 13 ಪ್ರಕರಣಗಳನ್ನು ತಿರಸ್ಕರಿಸಿ ಪರಿಹಾರದಿಂದ ಹೊರಗಿಡಲಾಗಿದೆ. 
68 ಪ್ರಕರಣಗಳಲ್ಲಿ ಸಂಬಂಧಪಟ್ಟ ಮೃತರ ಕುಟುಂಬಕ್ಕೆ ಪರಿಹಾರ ಕೊಡಲಾಗಿದೆ. ಪ್ರಸಕ್ತ 2025-26ನೇ ವರ್ಷದಲ್ಲಿ ಈ ವರೆಗೆ 32 ರೈತರು ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಈ ಪೈಕಿ 5 ಪ್ರಕರಣಗಳು ತಿರಸ್ಕೃತಗೊಂಡಿದ್ದು, 27 ಪ್ರಕರಣಗಳು ಪರಿಹಾರಕ್ಕೆ ಅರ್ಹಗೊಂಡಿವೆ.

ಪರಿಹಾರ ಪಾವತಿ ವಿಳಂಬ: 

ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿಯಾಗಿದೆ. ರೈತರ ಆತ್ಮಹತ್ಯೆ ಪ್ರಕರಣಕ್ಕೆ 5 ಲಕ್ಷ ರೂ., ಆಕಸ್ಮಿಕ/ ಹಾವು ಕಡಿತ ಮರಣಕ್ಕೆ 2 ಲಕ್ಷ ರೂ., ಬಣವೆ ನಷ್ಟ ಪ್ರಕರಣಕ್ಕೆ 20 ಸಾವಿರ ರೂ. ನೀಡಲಾಗುತ್ತದೆ. ಜತೆಗೆ, ಮೃತರ ಅವಲಂಬಿತರಿಗೆ ನೀಡುವ ಮಾಸಾಶನ, ಸಂತ್ರಸ್ತ ರೈತರ ಮಕ್ಕಳ ಸ್ನಾತಕೋತ್ತರ ಪದವಿ ವರೆಗಿನ ಶಿಕ್ಷಣಕ್ಕೂ ಸಹಾಯ ಮಾಡಲಾಗುತ್ತದೆ. 
ಇಂತಹ ಆತ್ಮಹತ್ಯೆ ಪ್ರಕರಣ ನಡೆದ ದಿನಾಂಕದಿಂದ 9 ತಿಂಗಳ ಒಳಗಾಗಿ ಇತ್ಯರ್ಥ ಮಾಡಿ ಪರಿಹಾರ ಪಾವತಿ ಮಾಡಬೇಕು. ಆಕಸ್ಮಿಕ ಮರಣ, ಬಣವೆ ನಷ್ಟ ಪ್ರಕರಣಗಳು ನಡೆದ ದಿನಾಂಕದಿಂದ 6 ತಿಂಗಳ ಒಳಗೆ ಇತ್ಯರ್ಥ ಪಡಿಸಿ ಪರಿಹಾರ ನೀಡಬೇಕು. ಉಪ ವಿಭಾಗಾಧಿಕಾರಿ ನೇತೃತ್ವದ ಸಮಿತಿಯಲ್ಲಿ ತೀರ್ಮಾನಿಸಲಾದ ಅರ್ಹ ಪ್ರಕರಣಗಳನ್ನು ಜಿಲ್ಲಾಧಿಕಾರಿ ಮುಖಾಂತರ ಡಿಬಿಟಿ ತಂತ್ರಾಂಶದ ಮೂಲಕ ಅರ್ಹ ಮೃತ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಆದರೆ, ಕೆಲವೊಂದು ಪ್ರಕರಣಗಳಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಪರಿಹಾರ ಪಾವತಿಗೆ ವಿಳಂಬವಾಗುತ್ತಿದೆ. ಬ್ಯಾಂಕ್ ಖಾತೆ ಸ್ಥಗಿತ, ಅಮಾನ್ಯಗೊಂಡಿರುವ ಖಾತೆ, ಆಧಾರ್ ಸಂಖ್ಯೆ ಜೋಡಣೆಯಾಗದ ಖಾತೆಗಳು...ಹೀಗೆ ವಿವಿಧ ಕಾರಣಗಳಿಂದ ಪರಿಹಾರ ವಿತರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

7.90 ಕೋಟಿ ರೂ. ಪರಿಹಾರ ವಿತರಣೆ: 

ಕಳೆದ ಮೂರು ವರ್ಷದಲ್ಲಿ 7.90 ಕೋಟಿ ರೂ. ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ 68 ಪ್ರಕರಣಗಳಿಗೆ 3.40 ಕೋಟಿ ರೂ. ಪರಿಹಾರ ನೀಡಲಾಗಿದೆ. 2024-25ರಲ್ಲಿ 66 ಪ್ರಕರಣಗಳಿಗೆ ಸಂಬಂಧಿಸಿದಂತೆ 3.30 ಕೋಟಿ ರೂ. ಪರಿಹಾರ ವಿತರಿಸಿದ್ದು, ಇನ್ನೂ ಎರಡು ಪ್ರಕರಣಗಳಿಗೆ ಪರಿಹಾರ ಬಾಕಿ ಉಳಿದಿದೆ. 2025-26ನೇ ಸಾಲಿನಲ್ಲಿ 24 ಪ್ರಕರಣಗಳಿಗೆ 1.20 ಕೋಟಿ ರೂ. ಕೊಡಲಾಗಿದೆ. ಇನ್ನೂ ಮೂರು ಪ್ರಕರಣಗಳಿಗೆ ಪರಿಹಾರ ಕೊಡುವುದು ಬಾಕಿ ಇದೆ.

ಮಳೆಯಿಂದ ತಗ್ಗಿದ ಕೃಷಿ ಸಂಕಷ್ಟ: 

ಸಾಲದ ಹೊರೆ, ಬೆಳೆಹಾನಿ, ಬೆಲೆ ಕುಸಿತ ಸೇರಿದಂತೆ ಇನ್ನಿತರ ಕಾರಣಗಳಿಂದ ಸಂಕಷ್ಟಕ್ಕೆ ಒಳಗಾದ ರೈತರು ಸಾವಿನ ಹಾದಿ ಹಿಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹದವಾದ ಮಳೆಯಿಂದ ರೈತರ ಸಂಕಷ್ಟ ಕಡಿಮೆಯಾಗಿರುವುದು ಆತ್ಮಹತ್ಯೆ ಸಂಖ್ಯೆ ಇಳಿಕೆಗೆ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರದ ಯೋಜನೆಗಳು ಮಾತ್ರವಲ್ಲದೆ, ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ನೀರಿನ ಸಮಸ್ಯೆ ಇರುವ ಕಡೆ ಸಣ್ಣ ನೀರಾವರಿಗೆ ಹಣ ನೀಡುವುದು, ಬೆಳೆ ಸಮೀಕ್ಷೆ ಮತ್ತು ವಿಮೆ ಸೌಲಭ್ಯ, ಎಸ್‌ಎಂಎಸ್ ಮೂಲಕ ಹವಾಮಾನದ ಬಗ್ಗೆ ಮುಂಚಿತ ಮಾಹಿತಿ, ಸೂಕ್ತ ಸಮಯಕ್ಕೆ ಗೊಬ್ಬರ, ಬೀಜಗಳ ಲಭ್ಯತೆ ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳು ರೈತರಿಗೆ ನೆರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಮಸ್ಯೆಗಳು ತಪ್ಪಿಲ್ಲ: 

ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾದರೂ ಕೆಲವೊಂದು ಸಮಸ್ಯೆಗಳು ಪರಿಹಾರ ಕಾಣದೆ ಮುಂದುವರಿದಿವೆ. ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಮಾರುಕಟ್ಟೆ ಸಮಸ್ಯೆ ಇನ್ನೂ ತಪ್ಪಿಲ್ಲ. ಕೃಷಿ ನಿರ್ವಹಣೆ, ಯೋಜನೆಗಳ ಪ್ರಾಮಾಣಿಕ ಅನುಷ್ಠಾನ ಮುಂತಾದ ದೀರ್ಘಕಾಲೀನ ಸಮಸ್ಯೆಗಳ ವಿಚಾರದಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ. ಜತೆಗೆ, ಕೃಷಿ ಬೆಳೆಗಳಿಗೆ ರೋಗರುಜಿಗಳು ತೀವ್ರವಾಗಿ ಕಾಡುತ್ತಿವೆ ಎನ್ನುತ್ತಾರೆ  ರೈತರು.

5ನೇ ಸ್ಥಾನದಲ್ಲಿ ಮೈಸೂರು ಜಿಲ್ಲೆ:

ರಾಜ್ಯವು ರೈತರ ಆತ್ಮಹತ್ಯೆ ಪ್ರಕರಣದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ವರದಿ ಹೇಳುತ್ತಿದೆ. ಮೈಸೂರು ಜಿಲ್ಲೆಯಲ್ಲೂ ಹೆಚ್ಚಿನ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ. ಬಯಲುಸೀಮೆಯ ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ ನಂತರ ಮೈಸೂರು ಜಿಲ್ಲೆ ಸ್ಥಾನ ಪಡೆದುಕೊಂಡಿವೆ. 
ರಾಜರ ಆಳ್ವಿಕೆಯಿಂದ ಸಂಪದ್ಬಭರಿತ, ಕೃಷಿಯಲ್ಲಿ ಪ್ರಗತಿ ಸಾಧಿಸಿರುವ, ನೀರಾವರಿ ಸೇರಿದಂತೆ ಇತರ ಕೃಷಿ ಮೂಲಸೌಕರ್ಯ ಹೊಂದಿರುವ ಮೈಸೂರು ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿಯೇ ವರದಿಯಾಗುತ್ತಿರುವುದು ಚಿಂತೆಗೀಡು ಮಾಡಿದೆ.
"

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಇದು ಆಶಾದಾಯಕ ಬೆಳವಣಿಗೆಯಾಗಿದ್ದು, ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯಲ್ಲಿ ಇತ್ಯರ್ಥ ಮಾಡಿದ ಇಂತಹ ಪ್ರಕರಣಗಳಿಗೆ, ಬೆಂಗಳೂರಿನಲ್ಲಿರುವ ಏಕೀಕೃತ ವ್ಯವಸ್ಥೆಯ ಮೂಲಕ ಅರ್ಹ ಮೃತ ಅವಲಂಬಿತರ ಕುಟುಂಬದ ಬ್ಯಾಂಕ್ ಖಾತೆಗೆ ಪರಿಹಾರ ಹಣ ವರ್ಗಾವಣೆಯಾಗುತ್ತಿದೆ.