ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಅಭಿಯಾನಗಳ ಪ್ರಗತಿ ಕುರಿತು ತಹಸೀಲ್ದಾರ್ ಜೆ.ಮಂಜುನಾಥ್ ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿರುವುದು. 
ಮೈಸೂರು

19 ಬೇಚರಾಕ್ ಹಳ್ಳಿಗಳಿನ್ನು ಕಂದಾಯ ಗ್ರಾಮ

ಪ್ರಮುಖ ಮುಖ್ಯಾಂಶಗಳು

  • ಹುಣಸೂರು ವ್ಯಾಪ್ತಿಯಲ್ಲಿ ಬದಲಾವಣೆ ಭಾಗ್ಯ
  • ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ
ಹುಣಸೂರು : ನಾಲ್ಕು ದಶಕಗಳಿಂದ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಹೋರಾಟ ನಡೆಸಿದ್ದ ಗ್ರಾಮೀಣ ಜನರಿಗೆ ಗುಡ್ ನ್ಯೂಸ್ ನೀಡಿದ ತಾಲೂಕು ಕಂದಾಯ ಇಲಾಖೆ ಕಚೇರಿ... ಪೋಡಿ ದುರಸ್ತಿ ಕಾರ್ಯದಲ್ಲೂ ಗಣನೀಯ ಸಾಧನೆಗೈದ ಕಂದಾಯ ಇಲಾಖೆ.. ರೆಕಾರ್ಡ್ ರೂಂ ಡಿಜಿಟಲೀಕರಣ.. !
ಕಂದಾಯ ಇಲಾಖೆಯಲ್ಲಿ ಆಗಿರುವ ಈ ಎಲ್ಲ ಕಾರ್ಯಗಳು ರೈತರ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಆರ್‌ಟಿಸಿ ಪಡೆಯಬೇಕೆಂದರೆ ಪರಿತಪಿಸುತ್ತಿದ್ದ ಹಾಗೂ ಭೂಮಿಯ ದಾಖಲೆಗಳನ್ನು ಪಡೆಯಬೇಕೆಂದರೆ ಹರಸಾಹಸಪಡುವ ಕಾಲವೂ ಇತ್ತು. ಆದರೆ ಕಂದಾಯ ಮಂತ್ರಿ ಕೃಷ್ಣಬೈರೇಗೌಡರ ನಿರ್ದೇಶನದಂತೆ ಕಂದಾಯ ಇಲಾಖೆ ಆಧುನಿಕ ತಂತ್ರಜ್ಞಾನ ಬಳಕೆಯತ್ತ ಮುಖ ಮಾಡಿದ ಮೇಲೆ ಅಧಿಕಾರಿಗಳೂ ಹೊಸತನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪರಿಣಾಮ ವ್ಯವಸ್ಥೆಯಲ್ಲಿನ ಸುಧಾರಣೆ ಕಾಣತೊಡಗಿದ್ದು, ಹುಣಸೂರು ತಾಲೂಕು ಕಂದಾಯ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಲವು ಅಭಿಯಾನಗಳ ಮೂಲಕ ತಾಲೂಕು ಕಚೇರಿಗೆ ಜನರು ಅಲೆಯುವುದನ್ನು ತಪ್ಪಿಸಲು ಕ್ರಮವಹಿಸಲಾಗಿದೆ.
ಕಂದಾಯ ಗ್ರಾಮಗಳಾದ ಬೇಚರಾಕ್ ಗ್ರಾಮಗಳು: ತಾಲೂಕಿನಲ್ಲಿ 19 ಬೇಚರಾಕ್ ಗ್ರಾಮಗಳು ಕಂದಾಯ ಗ್ರಾಮವಾಗಬೇಕೆಂದು 40 ವರ್ಷಗಳಿಂದ ತಾಲೂಕು ಆಡಳಿತದ ಮೇಲೆ ಒತ್ತಡ ಹೇರಿ ಹೋರಾಟ ನಡೆಸಲಾಗಿತ್ತು. ಅಧಿಕೃತವಾಗಿ ಕಂದಾಯ ಸ್ಥಾನಮಾನ ಇಲ್ಲದ ಗ್ರಾಮಗಳನ್ನು ಬೇಚರಾಕ್ ಗ್ರಾಮಗಳೆಂದು ಗುರುತಿಸಲಾಗುತ್ತದೆ. ಪ್ರಮುಖ ಗ್ರಾಮವೊಂದರ ಹೊರವಲಯದಲ್ಲಿ ಹುಟ್ಟಿಕೊಂಡ ಸಮೂಹವೊಂದರ ಪ್ರದೇಶ ತನ್ನ ಎಲ್ಲ ಆಗುಹೋಗುಗಳನ್ನು ಪ್ರಮುಖ ಗ್ರಾಮದೊಂದಿಗೆ ಹೊಂದಿರುತ್ತದೆ. ಭೂಮಿಯ ಆಸ್ತಿಯ ದಾಖಲೆಗಳು ಪ್ರಮುಖ ಗ್ರಾಮದ ಹೆಸರಿನಲ್ಲಿಯೇ ಇರುತ್ತದೆ. ಸಣ್ಣ ಸಮೂಹವಿರುವ ಪ್ರದೇಶದಲ್ಲಿ ಗ್ರಾಮಠಾಣಾವಾಗಲಿ, ಮೂಲಸೌಕರ್ಯಗಳಾಗಲಿ ದುರ್ಲಭವಾಗಿರುತ್ತದೆ. ಅಲ್ಲಿನ ಕುಟುಂಬಗಳಲ್ಲಿ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಅಗತ್ಯ ದಾಖಲೆಗಳು ಇರುವುದಿಲ್ಲ. ಆಸ್ತಿ ಹಂಚಿಕೆ, ಮಾರಾಟ, ಖರೀದಿ, ಬ್ಯಾಂಕ್ ಸಾಲಸೌಲಭ್ಯ ಇದ್ಯಾವುದಕ್ಕೂ ಸರ್ಕಾರದ ಅಧಿಕೃತ ಮನ್ನಣೆ ಸಿಗುವುದಿಲ್ಲ. ಇದರಿಂದಾಗಿ ಬೇಚರಾಕ್ ಗ್ರಾಮದ ನಿವಾಸಿಗಳಿಗೆ ಅಭಿವೃದ್ಧಿ ಎನ್ನುವುದು ಗಗನಕುಸುಮವಾಗಿದೆ.
2019ರಲ್ಲಿ ರಾಜ್ಯ ಸರ್ಕಾರ ಬೇಚರಾಕ್ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸೂಚಿಸಿ ಆದೇಶಿಸಿತು. ಅದರಂತೆ ತಾಲೂಕಿನಲ್ಲಿ ಪ್ರಸ್ತುತ 19 ಬೇಚರಾಕ್ ಗ್ರಾಮಗಳ ಪೈಕಿ ಇದೀಗ 18 ಕಂದಾಯ ಗ್ರಾಮಗಳಾಗಿ ಮತ್ತು 5 ಉಪಗ್ರಾಮಗಳ ಪೈಕಿ ಒಂದು ಉಪಗ್ರಾಮ ಕಂದಾಯ ಗ್ರಾಮವಾಗಿ ಪರಿವರ್ತಿತವಾಗಿದೆ. ದಶಕಗಳ ಕಾಲ ತಮ್ಮ ಆಸ್ತಿ ಪಾಸ್ತಿ, ಹಕ್ಕು, ವ್ಯವಹಾರಕ್ಕೆ ಮನ್ನಣೆಯೇ ಸಿಗದೆ ಆರ್ಥಿಕವಾಗಿ ಕುಗ್ಗಿಹೋಗಿದ್ದ ಈ ಎಲ್ಲ ಗ್ರಾಮಗಳ ನಿವಾಸಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ. 18 ಗ್ರಾಮಗಳಲ್ಲಿ ಒಟ್ಟು 592 ಹಕ್ಕುಪತ್ರಗಳನ್ನು ಅನುಮೋದನೆಗೊಂಡಿದ್ದು, 274 ಆಸ್ತಿಗಳನ್ನು ನೋಂದಣಿ ಮಾಡಿಕೊಡಲಾಗಿದೆ. ಬಾಕಿಯಿರುವ ಹಕ್ಕುಪತ್ರಗಳನ್ನು ಶೀಘ್ರ ನೋಂದಣಿ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ತಿಳಿಸಿದ್ದಾರೆ.
ಯಾವ್ಯಾವ ಗ್ರಾಮಗಳು?
ತಾಲೂಕಿನ ಮಧುಗಿರಿಕೊಪ್ಪಲು(ಮೂಲ ಕಂದಾಯ ಗ್ರಾಮ ಬನ್ನಿಕುಪ್ಪೆ), ಮರಳಯ್ಯನಕೊಪ್ಪಲು(ಬನ್ನಿಕುಪ್ಪೆ), ತೆಕ್ಕಲಹಾಡಿ(ಕಾಡುವಡ್ಡರಗುಡಿ), ಯಲಚವಾಡಿ(ದಲ್ಲಾಳು), ಮಹದೇವಪುರ ಹಾಡಿ(ದೈತ್ಯನಕೆರೆ ಹಾಡಿ), ವಿಜಯಗಿರಿಹಾಡಿ(ದಾಸನಪುರ), ಈರದಾಸನಕೊಪ್ಪಲು(ಗಾಗೇನಹಳ್ಳಿ), ಗೌರಿಪುರ(ಉದ್ದೂರು), ಕೆಂಪಮ್ಮನಹೊಸೂರು(ಅಂಕನಹಳ್ಲಿ), ಚೋಳೇನಹಳ್ಳಿ(ಕೆಂಪನಹಳ್ಳಿ), ಹುಂಡಿಮಾಳ(ಉಯಿಗೊಂಡನಹಳ್ಳಿ), ಹೊಸವಾರಂಚಿ(ಉಯಿಗೊಂಡನಹಳ್ಳಿ), ಲಕ್ಕನಕೊಪ್ಪಲು(ಮುಳ್ಳೂರು), ಹರವೆ ಕಲ್ಲಹಳ್ಳಿ(ರಾಮೇನಹಳ್ಳಿ), ಕಟ್ಟೆಮಳಲವಾಡಿ ಕೊಪ್ಪಲು(ಕಟ್ಟೆಮಳಲವಾಡಿ), ಶಂಕರೇಗೌಡನಕೊಪ್ಪಲು(ಕೆರೆಯೂರು), 1ನೇ ಪಕ್ಷಿರಾಜಪುರ(ಉಮ್ಮತ್ತೂರು), ಕಳ್ಳಿಕೊಪ್ಪಲು(ಜಾಬಗೆರೆ) ಗ್ರಾಮಗಳು ಕಂದಾಯ ಗ್ರಾಮಗಳಾಗಿವೆ. 5 ಉಪಗ್ರಾಮಗಳ ಪೈಕಿ ಬಿಳಿಕೆರೆ ಹೋಬಳಿಯ ಕೊಮ್ಮೇಗೌಡನಕೊಪ್ಪಲು(ಗೆರಸನಹಳ್ಳಿ) ಕಂದಾಯ ಗ್ರಾಮವಾಗಿ ರಚಿತವಾಗಿದೆ. ಪ್ರಸ್ತಾವನೆ ಹಂತದಲ್ಲಿ ತೆಂಕಲಕೊಪ್ಪಲು(ಹುಸೇನ್‌ಪುರ), ಉಪಗ್ರಾಮಗಳಾದ ಲಕ್ಷ್ಮೀಪುರ(ಕೂಡ್ಲೂರು), ಕಲ್ಕಡ(ಹರೀನಹಳ್ಳಿ), ಯಾಲಕ್ಕಿಕಟ್ಟೆ(ಕುಡಿನೀರುಮುದ್ದನಹಳ್ಳಿ) ಮತ್ತು ದೇವರಾಜ ಕಾಲನಿ(ಕರಣಕುಪ್ಪೆ) ಗ್ರಾಮಗಳು ಬಾಕಿ ಇವೆ.
ಪೋಡಿ ದುರಸ್ತಿ ಕಾರ್ಯ ಪ್ರಗತಿಯಲ್ಲಿ
2024ರಲ್ಲಿ ಸರ್ಕಾರದ ನಿರ್ದೇಶನದಂತೆ ಪೋಡಿ ದುರಸ್ತಿ ಅಭಿಯಾನವೂ ನಡೆದಿದ್ದು, ತಾಲೂಕಿನಲ್ಲಿ 1145 ಸರ್ಕಾರಿ ಸರ್ವೇ ನಂಬರ್‌ಗಳನ್ನು ಗುರುತಿಸಲಾಗಿದೆ. ಡಾಟಾ ಎಂಟ್ರಿ, 1 ಟು 5 ಟಿಪ್ಪಣಿ, ನಕ್ಷೆ ಮುಂತಾದ ಕಾರ್ಯಗಳನ್ನು ಕೈಗೊಂಡು ಈವರೆಗೆ 955 ಸರ್ವೇ ನಂಬರ್‌ಗಳ ದುರಸ್ತಿ ಕಾರ್ಯ ಸಂಪೂರ್ಣಗೊಂಡಿದ್ದು, 127 ನಂಬರ್‌ಗಳು ಬಾಕಿ ಇದೆ. ಅಲ್ಲದೇ 955 ಆಸ್ತಿಗಳ ಪೈಕಿ 760ಕ್ಕೆ ಅನುಮೋದನೆ ದೊರಕಿದೆ. ಈವರೆಗೆ 120 ಹೊಸ ಸರ್ವೇ ನಂಬರ್‌ಗಳನ್ನು ರಚಿಸಲಾಗಿದೆ.
ದಾಖಲೆಗಳ ಡಿಜಿಟಲೀಕರಣ
ಕಂದಾಯ ಇಲಾಖೆಯ ರೆಕಾರ್ಡ್ ರೂಂನ ದಾಖಲೆಗಳ ಡಿಜಿಟಲೀಕರಣ ಕಾರ್ಯವೂ ಪ್ರಗತಿಯಲ್ಲಿದ್ದು, ಶೇ.35ರಷ್ಟು ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಸಾರ್ವಜನಿಕರು ದಾಖಲೆಗಳನ್ನು ಕೇಳಿದಲ್ಲಿ ಪ್ರತಿ ಪುಟಕ್ಕೆ 9.60 ರೂ.ಗಳ ಶುಲ್ಕದೊಂದಿಗೆ ದಾಖಲೆಗಳನ್ನು ಪಡೆಯಬಹುದಾಗಿದೆ. ಪೌತಿಖಾತೆ ಆಂದೋಲನ ಪ್ರಗತಿಯಲ್ಲಿದ್ದು, ತಾಲೂಕಿನಲ್ಲಿ 19 ಸಾವಿರ ಪೌತಿದಾರರ(ಮರಣ ಹೊಂದಿದವರು ಹೆಸರಿನಲ್ಲಿ ಖಾತೆ ಇರುವುದು)ನ್ನು ಗುರುತಿಸಲಾಗಿದ್ದು ಈ ಪೈಕಿ ಪ್ರಸ್ತುತ 2800 ವಾರಸುದಾರರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ಕಾರ್ಯ ನಡೆಸಲಾಗುತ್ತಿದೆ. ಪೋಡಿದುರಸ್ತಿ, ಪೌತಿಖಾತೆ ಅಭಿಯಾನಗಳು ಕಟ್ಟುನಿಟ್ಟಾಗಿ, ನಿರಂತರವಾಗಿ ನಡೆಯುತ್ತಿದೆೆ. ಸಾರ್ವಜನಿಕರು ಕಂದಾಯ ಕಚೇರಿಯನ್ನು ಪದೇ ಪದೆ ಎಡತಾಕುವಂತೆ ಆಗದಿರಲು ಅಗತ್ಯ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಇನ್ನಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಕ್ರಮವಹಿಸಲಾಗುವುದು.