ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ 
ಮೈಸೂರು

189 ಕೋಟಿ ರೂ. ಸೈಬರ್ ವಂಚಕರ ಮಹಾರಾಷ್ಟ್ರದ ಬಂಧನ : ಮೈಸೂರು ಪೊಲೀಸರ ಕಾರ್ಯಾಚರಣೆ

ಮೈಸೂರು: ದೇಶದ ವಿವಿಧೆಡೆ 189.49 ಕೋಟಿ ರೂ.ಮೊತ್ತದ ಸೈಬರ್ ವಂಚನೆ ಮಾಡಿದ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಹಾರಾಷ್ಟ್ರದ ಯತೀನ್ ರಮೇಶ್ ಜೈನ್ ಹಾಗೂ ಮೊಹಮ್ಮದ್ ಶಾದಬ್ ಅಂಜುಮ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಪಂಜಾಬ್‌ನ ಅಮೀತ್ ಸಿಂಗ್ ತಲೆಮರೆಸಿಕೊಂಡಿದ್ದಾನೆ. ಕೆ.ಆರ್. ನಗರದ ಚಿನ್ನದ ವ್ಯಾಪಾರಿ ಜಿತೇಂದ್ರ ಕುಮಾರ್ ಖಂಡೆಲ ವಾಲ್ ಅವರನ್ನು ಈ ಮೂವರು ಆರೋಪಿಗಳು ವಾಟ್ಸ್‌ಆ್ಯಪ್ ಮೂಲಕ ಜ.27ರಂದು ಸಂಪರ್ಕಿಸಿದರು. ನಂತರ ಪ್ರತಿ ಗ್ರಾಂ ಚಿನ್ನಕ್ಕೆ 600 ರೂ. ಕಡಿಮೆ ನೀಡುವುದಾಗಿ ನಂಬಿಸಿ 100 ಗ್ರಾಂ ಚಿನ್ನಕ್ಕೆ 13,69,000 ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡರು.
ಈ ಕುರಿತು ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಪಿ. ಸುನಿಲ್ ನೇತೃತ್ವದ ತಂಡ ತನಿಖೆ ಕೈಗೆತ್ತಿಕೊಂಡು ಮಹಾರಾಷ್ಟ್ರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳು ಸಾರ್ವಜನಿಕರ ದಾಖಲಾತಿಗಳನ್ನು ಪಡೆದು ತೆರೆದಿರುವ 56 ಬ್ಯಾಂಕ್ ಖಾತೆಗಳ ಮೇಲೆ ದೇಶದ ವಿವಿಧೆಡೆ 196 ಸೈಬರ್ ದೂರುಗಳು ದಾಖಲಾಗಿದ್ದು, ಒಟ್ಟು 189.49 ಕೋಟಿ ರೂ.ವಂಚನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಮಲ್ಲಿಕ್, ಎಲ್. ನಾಗೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೈಬರ್ ಕ್ರೈಂ ಡಿವೈಎಸ್ಪಿ ಆರ್. ಶ್ರೀಕಾಂತ್, ಇನ್ಸ್‌ಪೆಕ್ಟರ್ ಎಸ್.ಪಿ. ಸುನಿಲ್, ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮೀ, ಸಿಬ್ಬಂದಿ ಎಸ್.ಮಂಜುನಾಥ, ಎಚ್.ವಿ.ರಂಗಸ್ವಾಮಿ, ಜಿ.ಎಸ್.ಅಭಿಷೇಕ್, ಸಿ.ಎನ್.ಮಹೇಶ ಪಾಲ್ಗೊಂಡಿದ್ದರು.