ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ತರಬೇತಿಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವಿಭಾಗೀಯ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಡಿ.ಎನ್. ಮಮತಾ ಉದ್ಘಾಟಿಸಿದರು.ಡಾ. ಬಿ.ಎನ್.ಜ್ಞಾನೇಶ್, ಶಾಮರಾಜ್ ಇನ್ನಿತರರಿದ್ದರು. Measures to provide storage facilities for finger millet (ragi) and paddy for up to 180 days
ಮೈಸೂರು

180 ದಿನದ ವರೆಗೆ ರಾಗಿ, ಭತ್ತ ದಾಸ್ತಾನು ಸೌಲಭ್ಯ ಒದಗಿಸಲು ಕ್ರಮ

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವಿಭಾಗೀಯ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಡಿ.ಎನ್. ಮಮತಾ ಹೇಳಿಕೆ ಬೆಂಬಲ ಬೆಲೆಗೆ ಬೆಳೆ ಸಮೀಕ್ಷೆ ಮಾಡಿಸಿ

ಮೈಸೂರು: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಕೃಷಿ ಭೂಮಿ ಉಳಿಸಿ ಅಭಿಯಾನದ ಅಂಗವಾಗಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭತ್ತ ಹಾಗೂ ರಾಗಿ ಬೆಳೆ ಉತ್ಪಾದನೆಯಲ್ಲಿ ತಾಂತ್ರಿಕತೆ ಕುರಿತ ತರಬೇತಿಯನ್ನು ಗುರುವಾರ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವಿಭಾಗೀಯ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಡಿ.ಎನ್. ಮಮತಾ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆಯು ಪ್ರಮುಖ ಬೆಳೆಯಾಗಿದ್ದು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವತಿಯಿಂದ ಭತ್ತ ಹಾಗೂ ರಾಗಿ ಉತ್ಪಾದನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು 90 ರಿಂದ 180 ದಿನಗಳವರೆಗೆ ದಾಸ್ತಾನು ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕಾದರೆ ಸಮೀಪದ ಎಪಿಎಂಸಿ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರನ್ನು ನೋಂದಾಯಿಸಿಕೊಂಡು ದಾಖಲೆ ಸಲ್ಲಿಸಿ, ಬೆಳೆ ಸಮೀಕ್ಷೆ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಇದರ ಜತೆಗೆ ರೈತರಿಗೆ ಜಮೀನಿನಲ್ಲಿ ಕೆಲಸ ನಿರ್ವಹಿಸುವಾಗ ಮರಣ ಹೊಂದಿದರೆ 1 ಲಕ್ಷ ರೂ. ಅಥವಾ ಅಂಗವಿಕಲರಾದರೆ 10 ಸಾವಿರ ರೂ. ವರೆಗೆ ವಿಮಾ ಮೊತ್ತವನ್ನು ರೈತರಿಗೆ ನೀಡಲಾಗುವುದು. ಮಾಹಿತಿಗಾಗಿ ಕರ್ನಾಟಕ ಕೃಷಿ ಮಾರುಕಟ್ಟೆ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಎನ್.ಜ್ಞಾನೇಶ್ ಮಾತನಾಡಿ, ಮಣ್ಣು ಉಳಿಸಿ ಕೃಷಿ ಉಳಿಸಿ, ರೈತರನ್ನು ಉಳಿಸಿ ಎಂಬ ಧ್ಯೇಯದೊಂದಿಗೆ ಅ.22ರಿಂದ ನವೆಂಬರ್ 30ರ ವರೆಗೆ ಜಿಲ್ಲಾದ್ಯಂತ ಕೃಷಿ ಭೂಮಿ ಉಳಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಮಾನ್ಯವಾಗಿ ರೈತರು ಒಂದೇ ಭತ್ತದ ತಳಿ ಬೆಳೆಯುತ್ತಿದ್ದಾರೆ. ಭತ್ತದಲ್ಲಿ ವಿವಿಧ ದೇಸಿಯ ತಳಿಗಳಿದ್ದು, ಅವುಗಳನ್ನು ಬೆಳೆದರೆ ಉತ್ತಮ ಆದಾಯ ಪಡೆಯಬಹುದು ಎಂದು ತಿಳಿಸಿದರು.

ರೈತರು ಇಂದಿನ ದಿನಗಳಲ್ಲಿ ಆಳುಗಳ ಕೊರತೆಯಿಂದ ಭತ್ತದ ಜಮೀನಿಗೆ ಕಳೆ ನಾಶಕ ಅಧಿಕವಾಗಿ ಬಳಸುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಕಡಿಮೆ ಬಳಸುತ್ತಿದ್ದಾರೆ. ಇದರಿಂದ ಅನ್ನ ವಿಷಮಯವಾಗುವುದರೊಂದಿಗೆ ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ನಾವು ಉಡುಗೊರೆಯಾಗಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಗಿಯಲ್ಲಿ ಗುಣಿ ಪದ್ಧತಿ ಬಿತ್ತನೆಯನ್ನು ಅಳವಡಿಕೊಂಡರೆ ಉತ್ತಮ ಇಳುವರಿ ಪಡೆಯಬಹುದು. ಮೈಸೂರು ಭಾಗಕ್ಕೆ ಜಿಪಿಯು 26, ಜಿಪಿಯು 28, ಎಂಆರ್ 1 ಹಾಗೂ ಎಂಆರ್6 ತಳಿಗಳು ಸೂಕ್ತವಾಗಿದೆ ಎಂದು ತಿಳಿಸಿದರು.

ಬೇಸಾಯ ವಿಷಯತಜ್ಞ ಶಾಮರಾಜ್ ಅವರು ಭತ್ತ ಹಾಗೂ ರಾಗಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳಾದ ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ರೋಗ ಹಾಗೂ ಕೀಟ ನಿರ್ವಹಣೆ ಕುರಿತು ಮಾಹಿತಿ ನೀಡಿದರು. 60ಕ್ಕೂ ಹೆಚ್ಚು ರೈತರು ಹಾಗೂ ಕೆವಿಕೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.