ಗುರು ವಿದುಷಿ ಸಿ.ಎನ್.ಅನಿತಾ 
ಮೈಸೂರು

ಡಿ.15ರಂದು ನೃತ್ಯ ವಿದ್ಯಾಪೀಠ ಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಲಾಮಂದಿರದಲ್ಲಿ ‘ಅಷ್ಟವಿಧ ನಾಯಿಕೆಯರ ಕಥನ’ ಪ್ರದರ್ಶನ
  • ‘ನರ್ತನ ವೃಕ್ಷಾವಳಿ - 2025’ ಪ್ರದರ್ಶನ
  • ಕೊಡಗಿನ ನಳಿನಿ ಕುಮಾರಿ ದೇವಾಯಿರ ಅವರಿಗೆ ‘ಭಾರತ ಕೇಸರಿ-2025’ ಪ್ರಶಸ್ತಿ
ಮೈಸೂರು: ನೃತ್ಯ ವಿದ್ಯಾಪೀಠ ಅಕಾಡೆಮಿ ಆಫ್ ಕ್ಲಾಸಿಕಲ್ ಡಾನ್ಸ್ ಆ್ಯಂಡ್ ಇಂಡಿಯನ್ ಆರ್ಟ್ಸ್ ಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ‘ನರ್ತನ ವೃಕ್ಷಾವಳಿ - 2025’ ಹಾಗೂ ‘ಅಷ್ಟವಿಧ ನಾಯಿಕೆಯರ ಕಥನ’ ಒಂದು ದೃಶ್ಯ ಕಾವ್ಯ ಪ್ರದರ್ಶನವನ್ನು ಡಿ.15ರಂದು ಸಂಜೆ 5 ಗಂಟೆಗೆ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಸಂಸ್ಥೆಯ ವಿವಿಧ ಶಾಖೆಗಳಿಂದ ಸುಮಾರು 100 ವಿದ್ಯಾರ್ಥಿನಿಯರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. 4 ವರ್ಷದಿಂದ- 40 ವರ್ಷದವರೆಗಿನ ವಿವಿಧ ಹಂತದ ಕಲಿಕೆಯಲ್ಲಿರುವವರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಗುರು ವಿದುಷಿ ಸಿ.ಎನ್.ಅನಿತಾ ಮಾರ್ಗದರ್ಶನದಲ್ಲಿ ಹಾಗೂ ನೃತ್ಯ ಸಂಯೋಜನೆಯಲ್ಲಿ ವಿದ್ವತ್ ಹಂತದ ವಿದ್ಯಾರ್ಥಿನಿಯರು ‘ಅಷ್ಟವಿಧ ನಾಯಿಕೆಯರ ಕಥನ’ವನ್ನು ವಿಶೇಷವಾದ ನೃತ್ಯ ಸಂಯೋಜನೆಯೊಂದಿಗೆ ನಡುಗನ್ನಡ ಭಾಷೆಯನ್ನು ಬಳಸಿ ಪ್ರಸ್ತುತಪಡಿಸಲಿದ್ದಾರೆ.
ಇವರಿಗೆ ನಟುವಾಂಗದಲ್ಲಿದಲ್ಲಿ ಗುರು ವಿದುಷಿ ಸಿ.ಎನ್.ಅನಿತಾ, ಹಾಡುಗಾರಿಕೆಯಲ್ಲಿ ವಿದ್ವಾನ್ ವಿ.ಸೂರಜ್ ಲಾಲ್, ಕುಮಾರಿ ನಯನ ನಾಗರಾಜ್, ಮೃದಂಗ ವಾದನದಲ್ಲಿ ವಿದ್ವಾನ್ ಕಲಾಮಂಡಲಂ ಜಿತಿನ್ ಜೈಮೋನ್, ವೇಣುವಾದನದಲ್ಲಿ ವಿದ್ವಾನ್ ಶ್ರೀಹರಿ ಕೊಟ್ಟಕಲ್, ರಿದಂ ಪ್ಯಾಡ್ಸ್‌ನಲ್ಲಿ ಗುರುದತ್ ಹುಣಸೂರು ಸಹಕಾರ ನೀಡಲಿದ್ದಾರೆ.
ಇದಕ್ಕೂ ಮುನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನೃತ್ಯ ಗುರು ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಭಾರತೀಯ ಮೀಸಲು ಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೊಡಗಿನ ನಳಿನಿ ಕುಮಾರಿ ದೇವಾಯಿರ ಅವರಿಗೆ ‘ಭಾರತ ಕೇಸರಿ-2025’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೋಭಾ ಬಾಲಕೃಷ್ಣ ಹಾಗೂ ಜಿ.ಕೆ.ಕಮಲಾ ಭಾಗವಹಿಸಲಿದ್ದಾರೆ. ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಸಂಸ್ಥೆಯ 16 ಪ್ರತಿಭೆಗಳನ್ನು ಪುರಸ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.