ಸರಗೂರು: ಕೆ.ಬೆಳ್ತೂರು ಭಾಗದ 30ಕ್ಕೂ ಹೆಚ್ಚು ಗ್ರಾಮಗಳ ವಿದ್ಯುತ್ ಹಾಗೂ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ 15 ಕೋಟಿ ರೂ.ವೆಚ್ಚದಲ್ಲಿ 66/11 ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಕೆ.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಬೆಳ್ತೂರು ಗ್ರಾಮದಲ್ಲಿ 0.332 ಕಿ.ಮೀ ಉದ್ದದ 66 ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಹಾಗೂ 66/11 ಕೆವಿ ಎಂವಿಎ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಉಪಕೇಂದ್ರ ನಿರ್ಮಾಣಗೊಂಡ ಬಳಿಕ ಮನುಗನಹಳ್ಳಿ, ಹುಣಗಳ್ಳಿ, ಲಂಕೆ, ಅಡಹಳ್ಳಿ, ಹುಣಸೆಹಳ್ಳಿ, ಹೂವಿನಕೊಳ, ಶಾಂತಿಪುರ, ಮಂಚಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಅಡಚಣೆ ರಹಿತ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದ್ದು, ವಾರ್ಷಿಕವಾಗಿ ಸುಮಾರು 1.67 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದರು.
ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರು ಹಾಗೂ ರೈತರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಉಪಕೇಂದ್ರದ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು. ಬೆಂಗಳೂರಿನ ಮಹಾವೀರ್ ಎಲೆಕ್ಟ್ರೋಮೆಕ್ ಲಿಮಿಟೆಡ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, 2027ರ ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕೆ.ಬೆಳ್ತೂರು ಗ್ರಾಮದಲ್ಲಿ ಸಿಸಿ ರಸ್ತೆ, ಭವನ ಹಾಗೂ ಶಾಲೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ವಾಲ್ಮೀಕಿ ಭವನ ಹಾಗೂ ರಾಮಮಂದಿರವನ್ನು ನವೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಟಿಸಿಎಲ್‌ನ ಎಇ ಪ್ರೀತಮ್, ತಹಸೀಲ್ದಾರ್ ಮೋಹನಕುಮಾರಿ, ಇಒ ಪ್ರೇಮ್ ಕುಮಾರ್, ಇಂಜಿನಿಯರ್ ಉಷಾ, ಗೋವಿಂದನಾಯಕ, ಪ್ರಭಾಕರ್, ರಾಜು, ಎಸ್.ಮೋಹನ್ ರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಂಜಪ್ಪ, ಜಿಪಂ ಮಾಜಿ ಸದಸ್ಯೆ ಭಾಗ್ಯಲಕ್ಷ್ಮೀ, ಪಿಡಿಒ ಕೃಷ್ಣಪ್ಪ, ಮಂಜು, ವರದನಾಯಕ, ಮಂಜುನಾಥ್, ಸುದರ್ಶನ್, ಎಇಇ ವಿನೋದ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.