ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ 
ಮೈಸೂರು

ಕುರಿಗಾಹಿ ಪುತ್ರನಿಗೆ 13 ಚಿನ್ನದ ಪದಕ!

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕರಾಗಿ ಅಥವಾ ಶಿಕ್ಷಕನಾಗುವ ಸಂಕಲ್ಪ ಮಾಡಿರುವೆ ಎಂದ ಚಂದ್ರಶೇಖರ್.
ಮೈಸೂರು: ಕೊಪ್ಪಳದ ಕುರಿಗಾಹಿ ಕೃಷಿಕರ ಪುತ್ರ ಎಂ.ಎಂ. ಕನ್ನಡ ವಿಭಾಗದಲ್ಲಿ 13 ಚಿನ್ನದ ಪದಕ 4 ನಗದು ಬಹುಮಾನ ಗಿಟ್ಟಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. 
ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕುರಿಗಾಹಿ ಸಣ್ಣಪ್ಪ-ಶಾಂತಮ್ಮ ದಂಪತಿಯ ಮೂರನೇ ಪುತ್ರ ಚಂದ್ರಶೇಖರ್ ಸಾಧನೆಯೊಂದಿಗೆ ಪಾಲಕರಿಗೆ ಹಿರಿಮೆ ತಂದಿದ್ದಾರೆ.
 ‘ಬಿಎಡ್ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬಂದ ನಾನು ಸಾಹಿತ್ಯದ ಮೇಲೆ ಒಲವು ಮೂಡಿ ಸ್ನಾತಕೋತ್ತರ ಪದವಿಗೆ ಮೈಸೂರು ವಿವಿ ಕ್ಯಾಂಪಸ್ ಮಾನಸಗಂಗೋತ್ರಿಯಲ್ಲಿ ಎಂ.ಎ.ಗೆ ಸೇರ್ಪಡೆಯಾದೆ.  
ಕಥೆ-ಕಾದಂಬರಿಗಳ ವಿಮರ್ಶೆ ಕಡೆಗೆ ವಿಶೇಷ ಪ್ರೀತಿ ಇದೆ. ನನಗೆ ಐಎಎಸ್-ಐಪಿಎಸ್ ಮಾಡಬೇಕೆಂಬ ಕನಸುಗಳಿಲ್ಲ. ನನ್ನ ತಂದೆ-ತಾಯಿಗೆ ಮೂರು ಹೊತ್ತು ಅನ್ನ ಹಾಕಬೇಕು ಎಂಬುದಷ್ಟೆ ನನ್ನ ಗುರಿ. ಆದ್ದರಿಂದ ಭವಿಷ್ಯದಲ್ಲಿ ಪಿಎಚ್.ಡಿ ಪದವಿ ಪಡೆದು ಸಹಾಯಕ ಪ್ರಾಧ್ಯಾಪಕರಾಗಿ ಅಥವಾ ಶಿಕ್ಷಕನಾಗುವ ಸಂಕಲ್ಪ ಮಾಡಿರುವೆ ಎಂದರು ಚಂದ್ರಶೇಖರ್.
‘ನನ್ನ ಅಣ್ಣ ಮತ್ತು ಅಕ್ಕ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟರು. ಆದರೆ, ನನಗೆ ಓದುವ ಆಸಕ್ತಿ ಬೆಳೆದು ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆಯುವಂತೆ ಮಾಡಿದೆ’ ಎಂದು ಹೆಮ್ಮೆಯಿಂದ ಹೇಳಿದರು. 
’ನಮ್ಮೂರಿನಲ್ಲಿರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನನ್ನ ಮಗಳು ಓದುತ್ತಿದ್ದಳು. ಕಾರಣಾಂತರಗಳಿಂದ ಆಕೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಕಿರಿಯ ಪುತ್ರ ಓದಿ ಸಾಧನೆ ಮಾಡಿರುವುದು ನಮಗೆ ಸಂತಸ ತಂದಿದೆ’ ಎಂದು ಚಂದ್ರಶೇಖರ್ ತಂದೆ ಸಣ್ಣಪ್ಪ, ತಾಯಿ ಶಾಂತಮ್ಮ ಭಾವುಕವಾಗಿ ಹೇಳಿದರು.

ಕಂಡಕ್ಟರ್ ಮಗಳಿಗೆ 11 ಪುರಸ್ಕಾರ

ಕೆಎಸ್‌ಆರ್‌ಟಿ ಬಸ್ ನಿರ್ವಾಹಕನ ಮಗಳು ಬಿ.ಎಸ್ಸಿ.ಯಲ್ಲಿ 6 ಚಿನ್ನದ ಪದಕ ಮತ್ತು 5 ನಗದು ಬಹುಮಾನ ಪಡೆದು ಗಮನ ಸೆಳೆದಿದ್ದಾರೆ. ರಾಜ್‌ಕುಮಾರ್ ರಸ್ತೆಯಲ್ಲಿರುವ ನಿವಾಸಿಯಾದ ಬಸ್ ನಿರ್ವಾಹಕ ತಂದೆ ಮತ್ತು ಪ್ರೌಢಶಾಲಾ ಶಿಕ್ಷಕಿ ದಂಪತಿಯ ಪುತ್ರಿ ಟಿ.ಹರ್ಮೈನ್ ಈ ಸಾಧನೆ ಮಾಡಿದ ವಿದ್ಯಾರ್ಥಿನಿ.
ಯುಪಿಎಸ್‌ಸಿ ತೇರ್ಗಡೆಯಾಗಬೇಕು ಎಂಬ ಗುರಿ ಹೊಂದಿರುವ ನಾನು ದ್ವಿತೀಯ ಪಿಯುಸಿಯಲ್ಲಿ ಶೇ.95ರಷ್ಟು ಅಂಕ ಪಡೆದು ಬಿ.ಎಸ್ಸಿ ಪದವಿ ಶಿಕ್ಷಣ ಪ್ರವೇಶಕ್ಕೆ ಪಡೆದಿದ್ದೆ. ಇದೀಗ 11 ಪದಕಗಳನ್ನು ಪಡೆದುಕೊಂಡಿದ್ದು, ಈಗಾಗಲೇ ಗುರಿಯೆಡೆಗೆ ನಡೆಯುವ ನಿಟ್ಟಿನಲ್ಲಿ ಓದಲು ಶುರು ಮಾಡಿದ್ದು, ಉನ್ನತ ಅಧಿಕಾರಿ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ರೈತನ ಪುತ್ರಿ ಸಾಧನೆ

ರೈತನ ಪುತ್ರಿ ಎಂ.ಸುಮಲತಾ 7 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಪಡೆದು ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. 
ಮೈಸೂರು ತಾಲೂಕಿನ ಮಾರಶೆಟ್ಟಿಯ ನಿವಾಸಿಯಾದ ರೈತ ಮಹೇಶ್ ಮತ್ತು ತಾಯಿ ಮಂಜುಳಾ ಗೃಹಿಣಿಯಾಗಿದ್ದು, ತಮ್ಮ ಮಗಳ ಓದಿಗೆ ಸಂಪೂರ್ಣ ಬೆಂಬಲ ನೀಡಿದರು. ‘ಪದವಿಗೆ ಪ್ರವೇಶ ಸಿಕ್ಕಿದ್ದೇ ಒಂದು ಅದೃಷ್ಟ. ಪ್ರಾಧ್ಯಾಪಕರು ನನ್ನ ವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಟ್ಟಿದ್ದರು. ಜತೆಗೆ ನನ್ನ ಶಿಕ್ಷಕರು ನನಗೆ ಮಾರ್ಗದರ್ಶನ ನೀಡಿದರು’ ಎಂದು  ಸುಮಲತಾ ಹೇಳಿದರು.

ಬಡತನವಿದ್ದರೂ ಛಲ ಬಿಡದ ಹಳ್ಳಿ ಹುಡುಗಿ

ಎಚ್.ಡಿ.ಕೋಟೆ ತಾಲೂಕಿನ ಕೆ.ಬೆಳತ್ತೂರಿನ ಸಿದ್ದನಾಯಕ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿ ವರ್ಣಿಕಾ ಬಡತನ ಮೆಟ್ಟಿ ನಿಂತು 5 ಚಿನ್ನದ ಪದಕ ಮತ್ತು 6 ನಗದು ಬಹುಮಾನ ಪಡೆದಿದ್ದಾರೆ. ವರ್ಣಿಕಾ ಸತತ ಪರಿಶ್ರಮದಿಂದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 
ಎಚ್.ಡಿ.ಕೋಟೆಯ ಆದಿಚುಂಚನಗಿರಿಯ ಕಾಲೇಜಿನಲ್ಲಿ ಪದವಿ ಪಡೆದ ನಾನು ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಅಧ್ಯಯನ ನಡೆಸಿದೆ. ನನಗೆ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿರುವುದು ಸಂತೋಷ ತಂದಿದೆ. ಮನೆಯಲ್ಲಿ ಬಡತನ ಇದ್ದರಿಂದ ಓದುವ ಛಲ ನನ್ನಲ್ಲಿ ಮೂಡಿತ್ತು ಎಂದು ಸ್ಮರಿಸಿದರು.