Lok Adalat 
ಮೈಸೂರು

ಲೋಕಅದಾಲತ್‌ನಲ್ಲಿ 12,764 ಪ್ರಕರಣ ಇತ್ಯರ್ಥ

ಅವಿನಾಶ್ ಜೈನಹಳ್ಳಿ
ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕಅದಾಲತ್‌ನಲ್ಲಿ 12,764 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಲೋಕಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣ, ವಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಲೋಕಅದಾಲತ್ ಆಯೋಜಿಸಲಾಗಿತ್ತು.
ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕಿನ ನ್ಯಾಯಾಲಯಗಳಲ್ಲಿ ಒಟ್ಟು 1,31,411 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 65,475 ಸಿವಿಲ್ ಪ್ರಕರಣಗಳು ಹಾಗೂ 65,936 ಕ್ರಿಮಿನಲ್ ಪ್ರಕರಣಗಳಾಗಿದ್ದವು. 44,746 ರಾಜಿಯಾಗಬಹುದಾದ ಪ್ರಕರಣಗಳ ಪೈಕಿ 22,064 ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು.
ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ಮೂಲಕ ಒಟ್ಟು 74,66,67,115 ರೂ. ಇತ್ಯರ್ಥಪಡಿಸಲಾಗಿದೆ.
ಈ ಸಲ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ 40 ದಂಪತಿ ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದು, ಸತಿ-ಪತಿಗಳಾಗಿ ಹೊಸ ಜೀವನ ಶುರು ಮಾಡಿದ್ದಾರೆ.
ಈ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಎಲ್ಲ ವಕೀಲರು ಹಾಗೂ ಕಕ್ಷಿದಾರರು, ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಎಲ್ಲ ಇಲಾಖೆಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಕೆ.ಅಮರ್‌ನಾಥ್, ಮೈಸೂರು ವಕೀಲರ ಸಂಘದ ಅಧ್ಯಕ್ಷ.ಎಸ್.ಲೋಕೇಶ್ ಮತ್ತು ಕಾರ್ಯದರ್ಶಿ.ಎ.ಜಿ.ಸುಧೀರ್ ಹಾಗೂ ಮೈಸೂರು ನಗರದ ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು ಹಾಜರಿದ್ದರು.