- ರಸ್ತೆ ಅವಘಡದಲ್ಲಿ ಗಾಯಗೊಂಡವರ ಸಂಖ್ಯೆ 14 ಸಾವಿರ
- ನಗರಕ್ಕಿಂತ ಗ್ರಾಮಾಂತರದಲ್ಲೇ ಅಧಿಕ ದುರ್ಘಟನೆಗಳು
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಐದು ವರ್ಷದಲ್ಲಿ ನಡೆದಿರುವ 12 ಸಾವಿರಕ್ಕಿಂತ ಹೆಚ್ಚು ರಸ್ತೆ ಅಪಘಾತಗಳಲ್ಲಿ 2,923 ಸಾವು, 14 ಸಾವಿರ ಜನರಿಗೆ ಗಾಯ...!
ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿಅಂಶಗಳ ಚಿತ್ರಣ ಇದು. ತ್ವರಿತವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. 5 ವರ್ಷಗಳಿಂದ ಹೆಚ್ಚು ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಹಾಗೂ ಮೈಸೂರು ಜಿಲ್ಲೆ 10ನೇ ಸ್ಥಾನದೊಳಗಿದೆ.
ಮೈಸೂರು ನಗರಕ್ಕಿಂತ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚು ರಸ್ತೆ ಅಪಘಾತಗಳು ಘಟಿಸಿವೆ. ಸಹಜವಾಗಿ ನಗರದಾಚೆಯೇ ಸಾವುಗಳು, ಗಾಯಾಳುಗಳ ಸಂಖ್ಯೆಯೂ ಅಧಿಕ. ಮೈಸೂರು ನಗರವು ನಗರದ ಪೊಲೀಸ್ ಆಯಕ್ತರ (ಕಮಿಷನರೇಟ್) ವ್ಯಾಪ್ತಿಗೆ ಬಂದರೆ, ಗ್ರಾಮಾಂತರ ಪ್ರದೇಶವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುತ್ತದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರಗಳು ಚುರುಕಾಗಿವೆ. ಜಿಲ್ಲೆ-ನೆರೆ ಜಿಲ್ಲೆಗಳಿಂದ ಬರುವ-ಹೋಗುವ ಜನಪ್ರವಾಹದ ಧಾವಂತವು ಅಪಘಾತ, ಜೀವ ಹಾನಿಗೆ ಕಾರಣವಾಗುತ್ತಿದೆ. ಖುಷಿಯು ಕ್ಷಣಾರ್ಧದಲ್ಲಿ ಕಮರುತ್ತಿದೆ. ಜನರು, ಅಧಿಕಾರಿಗಳು, ಪೊಲೀಸರು ಎಚ್ಚರಗೊಳ್ಳುವ ಅಗತ್ಯ ಇದೆ.
2021ರಿಂದ 2025 ಅಕ್ಟೋಬರ್ ವರೆಗೆ ಜಿಲ್ಲಾದ್ಯಂತ 12,808 ರಸ್ತೆ ಅಪಘಾತಗಳಾಗಿವೆ. ಈ ಪೈಕಿ 2,923 ಜೀವ ಕಳೆದುಕೊಂಡಿದ್ದರೆ, 14,226 ಜನರು ಗಾಯಗೊಂಡಿದ್ದಾರೆ.
ಮೈಸೂರು ನಗರದಲ್ಲಿ ರಸ್ತೆ ಅಪಘಾತ ತಡೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಿ ರಸ್ತೆ ಸಂಚಾರ ವ್ಯವಸ್ಥೆಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಸ್ಪೀಡ್ ಬ್ರೇಕರ್‌ಗಳು, ಜೀಬ್ರಾ ಲೈನ್ ಹಂಪ್‌ಗಳು, ಕ್ಯಾಟ್-ಐ, ತಿರುವುಗಳ ವಿಸ್ತರಣೆ, ರಸ್ತೆ ವಿಭಜಕಗಳು, ಪಾರ್ಕಿಂಗ್ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲಾಗಿದೆ.
ಹಳ್ಳಿಗಾಡಿನ ರಸ್ತೆಗಳು ಮೃತ್ಯುಕೂಪ:
ಜಿಲ್ಲಾ ಗ್ರಾಮಾಂತರದಲ್ಲೇ ಅಧಿಕ ರಸ್ತೆ ದುರ್ಘಟನೆಗಳು ವರದಿಯಾಗುತ್ತಿವೆ. ಐದು ವರ್ಷದಲ್ಲಿ 8,215 ಅಪಘಾತದಲ್ಲಿ 2120 ಜೀವಹಾನಿಯಾಗಿದ್ದರೆ, 9510 ಜನರು ಗಾಯಗೊಂಡು ನರಳಿದ್ದಾರೆ. ವರ್ಷಕ್ಕೆ ಸರಾಸರಿ ಅಪಘಾತಗಳ ಸಂಖ್ಯೆ 1500 ಮೀರಿದ್ದರೆ, ಸಾವುಗಳು 400ಕ್ಕಿಂತ ಅಧಿಕವಾಗಿದೆ. ಹಳ್ಳಿಗಾಡಿನ ರಸ್ತೆಗಳು ಮೃತ್ಯುಕೂಪದಂತಾಗಿವೆ.
ನಗರದಲ್ಲೂ 803 ಸಾವು
ಮೈಸೂರು ನಗರ ವ್ಯಾಪ್ತಿಯಲ್ಲಿ ಐದು ವರ್ಷದಲ್ಲಿ 4,593 ರಸ್ತೆ ಅಪಘಾತಗಳು ಘಟಿಸಿ 803 ಜನರು ಜೀವ ಕಳೆದುಕೊಂಡಿದ್ದರೆ, 4,716 ವ್ಯಕ್ತಿಗಳು ಗಾಯಗೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ರಸ್ತೆ ಸಂಚಾರದ ಹೆಚ್ಚಾಗುವ ಸಾವು-ನೋವುಗಳ ಏರಿಕೆಯಾಗುತ್ತಿರುವುದು ಚಿಂತೆಗೀಡು ಮಾಡಿದೆ.
ಅಪಘಾತ ತಡೆಗೆ ವಿವಿಧ ಕ್ರಮ
ನಗರ- ಪಟ್ಟಣಗಳು, ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ನಗರ-ಜಿಲ್ಲಾ ಪೊಲೀಸ್ ಇಲಾಖೆ, ಇತರ ಇಲಾಖೆಗಳು ಪರಿಣಾಮಕಾರಿಯಾಗಿ ಕ್ರಮವಹಿಸಬೇಕಿದೆ.
ಮೈಸೂರು ನಗರದಲ್ಲಿ 12 ಅಪಾಯಕಾರಿ ಜಾಗ (ಆಕ್ಸಿಡೆಂಟ್ ಬ್ಲಾಕ್‌ಸ್ಪಾಟ್) ಹಾಗೂ ಹೆಚ್ಚೆಚ್ಚು ಅಪಘಾತ ವರದಿಯಾಗುತ್ತಿರುವ ಜಾಗ ಗುರುತಿಸಲಾಗಿದೆ.
ಇಂತಹ ಜಾಗಗಳಲ್ಲಿ ಹೈಮಾಸ್ಟ್ ದೀಪ, ಸ್ಪೀಡ್ ಬ್ರೇಕರ್‌ಗಳು, ಜೀಬ್ರಾ ಲೈನ್, ಹಂಪ್‌ಗಳು, ಕ್ಯಾಟ್-ಐ ಹಾಗೂ ಇನ್ನಿತರ ಪ್ರತಿಫಲಕ (ರಿಪ್ಲೆಕ್ಟರ್ ಲೈಟ್), ಮಿಣುಕು ದೀಪ ಅಳವಡಿಕೆ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗುತ್ತಿದೆ.
ತಿರುವುಗಳ ವಿಸ್ತರಣೆ, ರಸ್ತೆ ವಿಭಜಕಗಳು ಹಾಗೂ ವಾಹನಗಳ ಚಕ್ರಗಳು ರಸ್ತೆಯಿಂದ ಜಾರದಂಥ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಆಕ್ಸಿಡೆಂಟ್‌ಗಳಿಗೆ ಕಾರಣವೇನು?
ರಸ್ತೆ ಸಂಚಾರ ಸುರಕ್ಷೆ ಭಾಗವಾಗಿ ರಸ್ತೆ-ಸಂಚಾರ ಸಪ್ತಾಹ, ಮಾಸಾಚರಣೆ ನಡೆದರೂ ಸಾರ್ವಜನಿಕರು ಅರಿವು ಮೂಡುತ್ತಿಲ್ಲ.
ಹೀಗಾಗಿ, ಸವಾರರು ಬೇಗ ಹೋಗುವ ಆತುರ, ರಸ್ತೆ ನಿಯಮ ಉಲ್ಲಂಘನೆ, ಅವೈಜ್ಞಾನಿಕ ರಸ್ತೆ ನಿರ್ಮಾಣ, ಅಪಘಾತ ವಲಯಗಳು, ಸಂಚಾರ ನಿಯಮ ಉಲ್ಲಂಘನೆ, ಏಕಮುಖ ಸಂಚಾರ (ಒನ್-ವೇ) ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ,
ವೀಲಿಂಗ್, ಕರ್ಕಶ ಸೈಲೆನ್ಸರ್ ಅಳವಡಿಕೆ, ಲೇನ್ ಬಳಸದಿರುವುದು, ಗಲ್ಲಿ, ಕಿರುರಸ್ತೆಗಳಲ್ಲಿ ಅತಿಯಾದ ವೇಗ, ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ಚಾಲನೆ, ಸೂಚನೆ ನೀಡದೆ ತಿರುವು ಪಡೆಯುವುದು, ಪ್ರವೇಶಿಸುವುದು ಹೀಗೆ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳು ಏರಿಕೆಯಾಗುತ್ತಲೇ ಸಾಗಿದೆ. ಇದನ್ನು ತಡೆದು ಜೀವ ಉಳಿಸುವ ಕೆಲಸವಾಗಬೇಕಿದೆ.
ಮೈಸೂರು ನಗರ ಪ್ರದೇಶ (ಪೊಲೀಸ್ ಕಮಿಷನರೇಟರ್ ವ್ಯಾಪ್ತಿ)
ವರ್ಷ ರಸ್ತೆ ಅಪಘಾತಗಳು ಸಾವುಗಳು ಗಾಯಗೊಂಡವರು
2025(ಅಕ್ಟೋಬರ್ ವರೆಗೆ)1083 171 1218
ಜಿಲ್ಲಾ ಗ್ರಾಮಾಂತರ ಪ್ರದೇಶದಲ್ಲಿ (ಎಸ್‌ಪಿ ವ್ಯಾಪ್ತಿಯಲ್ಲಿ)
ವರ್ಷ ರಸ್ತೆ ಅಪಘಾತಗಳು ಸಾವುಗಳು ಗಾಯಗೊಂಡವರು
2025(ಅಕ್ಟೋಬರ್ ವರೆಗೆ)1526 340 1913
ನಗರ ಮತ್ತು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಮಾಹಿತಿ
ವರ್ಷ ರಸ್ತೆ ಅಪಘಾತಗಳು ಸಾವುಗಳು ಗಾಯಗೊಂಡವರು
2025(ಅಕ್ಟೋಬರ್ ವರೆಗೆ)2609 511 3131