ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ ಇದ್ದರು. 
ಮೈಸೂರು

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 11 ರೋಗಿಗಳ ಸಾವು

ಮೈಸೂರು: ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 11 ರೋಗಿಗಳು ಮೃತಪಟ್ಟಿದ್ದು, ಚಿಕಿತ್ಸೆ ದೊರೆಯದೆ ರೋಗಿಗಳು ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಳಗ್ಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು ಇಲ್ಲದ ಹಿನ್ನೆಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆತ್ತಿಲ್ಲ. ಚಿಕಿತ್ಸೆ ದೊರೆಯದೆ ರೋಗಿಗಳು ಮೃತಪಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? ಆಸ್ಪತ್ರೆಯ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಈ ಸಂದರ್ಭ ಸಾರ್ವಜನಿಕರನ್ನು ಪೊಲೀಸರು ಸಮಾಧಾನ ಪಡಿಸಲು ಯತ್ನಿಸಿದಾಗ ಅವರ ಮೇಲೆ ಸಹ ಜನರು ಮುಗಿಬಿ ದ್ದರು.
ಸ್ಪಷ್ಟನೆ ನೀಡಿದ ಆಸ್ಪತ್ರೆ: ವೈದ್ಯರ ಕೊರತೆಯಿಂದ ಚಿಕಿತ್ಸೆ ದೊರೆಯದೆ ಯಾವುದೇ ರೋಗಿಗಳು ಮೃತಪಟ್ಟಿಲ್ಲ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 11 ರೋಗಿಗಳು ಮೃತಪಟ್ಟಿದ್ದಾರೆ ಎಂದು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ ಸ್ಪಷ್ಟಪಡಿಸಿದ್ದಾರೆ.
ಜಯದೇವ ಆಸ್ಪತ್ರೆಗೆ ಮೈಸೂರು ಜಿಲ್ಲೆಯವರು ಮಾತ್ರವಲ್ಲದೆ ನೆರೆಯ ಕೊಡಗು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದಲೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಆಸ್ಪತ್ರೆಯ ಮೇಲೆ ಸಹಜವಾಗಿಯೇ ಒತ್ತಡ ಇದೆ. ಒಬ್ಬ ವೈದ್ಯರು ಪ್ರತಿನಿತ್ಯ 50 ರಿಂದ 60 ರೋಗಿಗಳನ್ನು ನೋಡಬಹುದು. ಆದರೆ, ನಮ್ಮಲ್ಲಿ 100ಕ್ಕೂ ಹೆಚ್ಚು ರೋಗಿಗಳನ್ನು ವೈದ್ಯರು ನೋಡುವ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿ ಟ್ರಾೃಲಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಪ್ರಸ್ತುತ 20 ರೋಗಿಗಳು ಟ್ರ್ಯಾಲಿಯಲ್ಲಿಯೇ ಇದ್ದಾರೆ. ಹೀಗಿದ್ದರೂ ರೋಗಿಗಳಿಗೆ ನಾವು ಗುಣಮಟ್ಟದ ಸೇವೆ ನೀಡಲು ಪ್ರಯತ್ನ ಪಡುತ್ತಿದ್ದೇವೆ ಎಂದರು.
ಸಿಸಿ ಟಿವಿ ಪರಿಶೀಲಿಸಿ: ರಾತ್ರಿ ಮೂವರು ವೈದ್ಯರು ಕರ್ತವ್ಯದಲ್ಲಿ ಇದ್ದರು, ಚಿಕಿತ್ಸೆ ದೊರೆಯದೆ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಮಾತು ಸತ್ಯಕ್ಕೆ ದೂರವಾ ದದ್ದು. ಸಿಸಿ ಕ್ಯಾಮರಾ ಪರಿಶೀಲಿಸಿದರೆ ಎಷ್ಟು ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದರು ಎಂಬುದು ಮನದಟ್ಟಾಗುತ್ತದೆ. ಗಂಭೀರ ಸ್ಥಿತಿಯ್ಲಲಿದ್ದ 11 ಜನರು ಮೃತಪಟ್ಟಿರುವುದನ್ನು ನೋಡಿ ಜನರು ಆತಂಕಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಡಾ.ಸದಾನಂದ ಸ್ಪಷ್ಟನೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 11 ಜನರು ಮೃತಪಟ್ಟಿರುವುದು ಇದೇ ಮೊದಲು. ಸಾಮಾನ್ಯವಾಗಿ ನಾಲ್ಕೈದು ರೋಗಿಗಳು ಮೃತಪಡುತ್ತಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಮೃತಪಟ್ಟಿರುವುದನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮೃತಪಟ್ಟ 11 ಜನರ ಪೈಕಿ ಬಹುತೇಕರ ವಯಸ್ಸು 60 ವರ್ಷ ಮೇಲ್ಪಟ್ಟಿದ್ದು, ತೀವ್ರ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದರು.