ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದು.  
ಮೈಸೂರು

ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಫುಡ್‌ಕಿಟ್

ಸರಗೂರ: ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ದೊಡ್ಡ ನಿಂಗಯ್ಯ ಅವರು ಈಚೆಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಕುಟುಂಬಗಳಿಗೆ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ತಾಲೂಕಿನ ಕೂಡಗಿ ಗ್ರಾಮದಲ್ಲಿ ಇತ್ತೀಚೆಗೆ ರೈತ ದೊಡ್ಡನಿಂಗಯ್ಯ ಹುಲಿ ದಾಳಿಗೆ ಬಲಿಯಾಗಿದ್ದರು. ಶಾಸಕ ಅನಿಲ್ ಚಿಕ್ಕಮಾದು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿ ಜಮೀನುಗಳಿಗೆ ಹೋಗಲು ಭಯಪಡುವುದರಿಂದ ಅರಣ್ಯ ಇಲಾಖೆ ವತಿಯಿಂದ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದ ಕುಟುಂಬಗಳಿಗೆ ಆಹಾರ ಕಿಟ್ ನೀಡಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಈ ವೇಳೆ ಮೊಳೆಯೂರು ವಲಯ ಅರಣ್ಯಾಧಿಕಾರಿ ಅಮೃತಾ ಮಾಯಪ್ಪ ಮಾತನಾಡಿ, ರೈತ ದೊಡ್ಡ ನಿಂಗಯ್ಯ ಹುಲಿ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಈ ಭಾಗದ ಜನರು ಕೂಲಿ ಮತ್ತು ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಸಕರ ನಿರ್ದೇಶನದಂತೆ 3 ದಿನಗಳಿಂದ ಗ್ರಾಮಸ್ಥರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಿದ್ದೇವೆ ಎಂದರು.

100ಕ್ಕೂ ಹೆಚ್ಚು ಸಿಬ್ಬಂದಿ ಡ್ರೋನ್ ಕ್ಯಾಮರಾ ಮತ್ತು ಸಾಕಾನೆ ಬಳಸಿಕೊಂಡು ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರೆ ಈವರೆಗೆ ಹುಲಿಯ ಸುಳಿವು ಸಿಕ್ಕಿಲ್ಲ. ಇಲಾಖೆ ಮೇಲಾಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಕಾರ್ಯಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು.

ಬಿ ಮಟಕರೆ ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿ, ಕೂಡಗಿಯಲ್ಲಿ ಹುಲಿ ದಾಳಿಗೆ ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಭಾಗದ ರೈತರ‌್ಯಾರು ಜಮೀನು ಹತ್ತಿರಕ್ಕೆ ಹೋಗುತ್ತಿಲ್ಲ. ಶಾಸಕರು ಹೇಳಿದ ದಿನದಿಂದ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದ ಕುಟುಂಬಗಳಿಗೆ ಅರಣ್ಯ ಇಲಾಖೆ ಆಹಾರ ಕಿಟ್ ನೀಡುತ್ತಿದೆ. ಆದಷ್ಟು ಶೀಘ್ರದಲ್ಲಿ ಹುಲಿ ಸೆರೆಯಿಡಿದು ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಜತೆಗೆ ಕಾಡಂಚಿನ ಜಮೀನುಗಳಲ್ಲಿ ಬೆಳೆ ಕಟಾವು ಮಾಡಿಕೊಂಡು ತರಲು ಸಿಬ್ಬಂದಿ ನೇಮಿಸಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿದ್ದು, ಸುರೇಶ್, ಕೃಷ್ಣ ಇತರರು ಇದ್ದರು.