ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ನೀಡಿರುವ ಕೊಡುಗೆ ಪರಿಗಣಿಸಿ ಅವರ ಹೆಸರನ್ನು ನಗರದ ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡುವ ವಿಚಾರ ಇದೀಗ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಕೆಆರ್‌ಎಸ್ ರಸ್ತೆಯ ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟೇಶ್ವರ ದೇವಾಲಯದಿಂದ ರಾಯಲ್ ಇನ್ ಹೋಟೆಲ್ ಜಂಕ್ಷನ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ’ ಎಂದು ಹೆಸರಿಡಲು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಆಕ್ಷೇಪಣ ಸಲ್ಲಿಸಲು ನಗರ ಪಾಲಿಕೆಯು ಪ್ರಕಟಣೆ ನೀಡಿದೆ.
ಈ ಮಾರ್ಗವು ಕೆಆರ್‌ಎಸ್ ಜಲಾಶಯದ ಕಡೆಗೆ ತೆರಳುವ ಕಾರಣದಿಂದ ಈ ರಸ್ತೆಯನ್ನು ಕೆಆರ್‌ಎಸ್ ರಸ್ತೆ ಎಂದು ಕರೆಯಲಾಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲೂ ಇದೇ ಹೆಸರನ್ನು ಕಾಣಬಹುದು. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭ ಕೆಆರ್‌ಎಸ್ ರಸ್ತೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ನಿರ್ಮಾಣ ಗೊಂಡಿತು. ಅಲ್ಲದೆ, ಮೈಸೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಹಲವಾರು ಕೊಡುಗೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಅವರ ಹೆಸರು ಇಡಬೇಕು ಎಂಬ ಒತ್ತಾಯದ ಮೇರೆಗೆ ನಗರ ಪಾಲಿಕೆಯು ಸಿದ್ದರಾಮಯ್ಯ ಹೆಸರು ಇಡಲು ಮುಂದಾಗಿದೆ.
ಈ ರಸ್ತೆಯು ಚಾಮರಾಜ ಕ್ಷೇತ್ರದ ಮೂಲಕ ಹಾದು ಹೋಗಲಿದ್ದು, ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಚಾಮರಾಜ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಈ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡಬೇಕು ಎಂದು ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರನ್ನು ಇಡುವ ನಿರ್ಧಾರಕ್ಕೆ ಬಂದಿದೆ.
ಪರ-ವಿರೋಧ: ಸಿದ್ದರಾಮಯ್ಯ ಹೆಸರು ಇಡುವುದಕ್ಕೆ ಸಂಬಂಧಿಸಿದಂತೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪರ-ವಿರೋಧದ ಮಾತುಗಳು ಕೇಳಿ ಬರುತ್ತಿದೆ. ಪಾಲಿಕೆ ನಿರ್ಧಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಕೆಲವು ಸಂಘ ಸಂಸ್ಥೆಗಳ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜಾತ್ಯತೀತ ಜನದಾಳ ಪಕ್ಷವು ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಮುಡಾ ಹಗಣರದ ಆರೋಪಿಯಾಗಿರುವ ಸಿದ್ದರಾಮಯ್ಯ ಹೆಸರನ್ನು ಕೆಆರ್‌ಎಸ್ ರಸ್ತೆ ಇಡುವುದು ಸರಿಯಲ್ಲ. ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಅವರ ಹೆಸರನ್ನು ರಸ್ತೆಗೆ ಇಡಬಾರದು ಎಂದು ಒತ್ತಾಯಿಸಿದೆ.
ಹೆಸರು ಇಟ್ಟರೆ ತಪ್ಪೇನು?: ಆದರೆ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪಾಲಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಅವರು ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ತಪ್ಪೇನು ಇದೆ. ಹೆಸರು ಇಡುವುದರಲ್ಲೂ ತಪ್ಪು ಹುಡುಕುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ’ ಎಂದು ಸಿದ್ದರಾಮಯ್ಯ ಪರ ಬ್ಯಾಂಟಿಂಗ್ ಬೀಸಿದ್ದಾರೆ.
ಕೌನ್ಸಿಲ್ ಒಪ್ಪಿಗೆ ಇಲ್ಲ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಎ-1 ಆರೋಪಿಯಾಗಿದ್ದಾರೆ. ಅಂತಹ ವ್ಯಕ್ತಿಯ ಹೆಸರನ್ನು ನಗರದ ರಸ್ತೆಯೊಂದಕ್ಕೆ ಇಡುವುದು ಸರಿಯಲ್ಲ. ಅಲ್ಲದೆ, ನಗರದ ಯಾವುದೇ ರಸ್ತೆಗೆ ವ್ಯಕ್ತಿಯೊಬ್ಬರ ಹೆಸರು ಇಡಲು ನಗರ ಪಾಲಿಕೆ ಕೌನ್ಸಿಲ್‌ನ ಒಪ್ಪಿಗೆಯ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ಚುನಾಯಿತ ಸದಸ್ಯರ ಕೌನ್ಸಿಲ್ ಒಪ್ಪಿಗೆ ಇಲ್ಲದೆ ಹೆಸರು ಇಡುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪಾಲಿಕೆಗೆ ಲಿಖಿತ ಪತ್ರ ಬರೆದಿದ್ದು ಸಿದ್ದರಾಮಯ್ಯ ಮುಡಾ ಹಗರಣದ ವಿಚಾರಣೆ ಎದುರಿಸುತ್ತಿರುವ ಸಂದರ್ಭ ಅವರ ಹೆಸರನ್ನು ರಸ್ತೆಗೆ ಇಡಬೇಡಿ ಎಂದು ತಮ್ಮ ಆಕ್ಷೇಪವನ್ನು ದಾಖಲಿಸಿದ್ದಾರೆ.
ಆಕ್ಷೇಪಣೆಗೆ 30 ದಿನ ಕಾಲಾವಕಾಶ: ಸಿದ್ದರಾಮಯ್ಯ ಹೆಸರನ್ನು ಕೆಆರ್‌ಎಸ್ ರಸ್ತೆಗೆ ಇಡುವ ಸಂಬಂಧ ಆಕ್ಷೇಪಣೆಗಳು ಇದ್ದರೆ 30 ದಿನಗಳ ಒಳಗೆ ಸಲ್ಲಿಸುವಂತೆ ನಗರ ಪಾಲಿಕೆಯು ಪತ್ರಿಕಾ ಪ್ರಕಟಣೆಯನ್ನು ಡಿ.13 ರಂದು ನೀಡಿದೆ. ನಗರ ಪಾಲಿಕೆಯಲ್ಲಿ 22-11-2024 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.