ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ನೂರಾರು ಕಾರ್ಮಿಕರು ತಮ್ಮ ತಾಯ್ನಡಿಗೆ ತೆರಳಿದರು. ಹೊರಡುವ ಮುನ್ನ ಅನ್ನ ನೀಡಿದ ಇಲ್ಲಿಯ ಮಣ್ಣಿಗೆ ಕೆಲವರು ಕೈಮುಗಿದು ನಮಸ್ಕರಿಸಿದರು.
ಕರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ 1391 ವಲಸೆ ಕಾರ್ಮಿಕರು ಭಾನುವಾರ ಶ್ರಮಿಕ್ ರೈಲಿನಲ್ಲಿ ಉತ್ತರ ಪ್ರದೇಶದ ಗೋರಖಪುರ್‌ಗೆ ಭಾರವಾದ ಮನಸ್ಸಿನಿಂದ ಪ್ರಯಾಣ ಬೆಳೆಸಿದರು. ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಬರುವುದಾಗಿ ಹೇಳಿದರು.
ಸತತ 58 ದಿನಗಳಿಂದ ತವರಿಗೆ ತೆರಳಲು ಚಡಪಡಿಸುತ್ತಿದ್ದ ಕಾರ್ಮಿಕರು ಜಿಲ್ಲಾಡಳಿತ ನೀಡಿದ ಸತ್ಕಾರ, ಆರೋಗ್ಯ ಕಾಳಜಿ ಕಂಡು ಗದ್ಗದಿತರಾದರು. ಯುವಕರು, ಮಹಿಳೆಯರು, ಮಕ್ಕಳು, ವಯಸ್ಕರು ಭಾವುಕರಾಗಿ ಕಣ್ಣೀರು ಸುರಿಸಿದರು. ಮತ್ತಷ್ಟು ಜನರು ರೈಲ್ವೆ ಸಿಬ್ಬಂದಿಗೆ ಕೈ ಮುಗಿದು ನಮಿಸಿದರು.
ಶನಿವಾರ ನಗರದ ಅಶೋಕಪುರಂ ರೈಲು ನಿಲ್ದಾಣದಿಂದ 1520 ಜನರು ಉತ್ತರ ಪ್ರದೇಶದ ಗೋರಖ್‌ಪುರ್‌ಗೆ ಪ್ರಯಾಣ ಬೆಳೆಸಿದ್ದರು. 2ನೇ ದಿನವಾದ ಭಾನುವಾರ ಕೂಡ 895 ರೂ. ಟಿಕೆಟ್ ಖರೀದಿಸಿ ಕಾರ್ಮಿಕರು ಪ್ರಯಾಣ ಬೆಳೆಸಿದರು.
ಉತ್ತರ ಭಾರತದಿಂದ ಆಗಮಿಸಿರುವ ಜನರು, ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ, ಪಾನಿಪುರಿ, ಐಸ್‌ಕ್ರೀಮ್, ಸೋಡಾ, ಟೀ ಅಂಗಡಿ ಸೇರಿ ವಿವಿಧ ಚಾಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ರೂಪಿಸಿಕೊಂಡಿದ್ದಾರೆ. ಫ್ಲೈವುಡ್ ಕಾರ್ಖಾನೆ ಸೇರಿ ವಿವಿಧ ಕಾರ್ಖಾನೆಗಳ ಬಾಯ್ಲರ್ ವಿಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಲಾಕ್‌ಡೌನ್‌ನಿಂದಾಗಿ ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಕೆಲಸವಿಲ್ಲ, ಕೂಲಿಯೂ ಇಲ್ಲ. ಪುಡಿಗಾಸು ಕೂಡ ಕರಗಿ ಹೋಗಿದ್ದು, ಇಡೀ ಜೀವನ ಅಡಕತ್ತರಿಗೆ ಸಿಲುಕಿದಂತಾಗಿದೆ. ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳು ನೀಡಿದ ಆಹಾರ ಪೊಟ್ಟಣವನ್ನು ಸ್ವೀಕರಿಸಿ ದಿನದೂಡುತ್ತಿದ್ದರು. ಆದರೆ, ಲಾಕ್‌ಡೌನ್ ದೀರ್ಘಾವಧಿಗೆ ವಿಸ್ತರಣೆಯಾಗುತ್ತಿದ್ದಂತೆ ತವರೂರಿಗೆ ಮರಳಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು.
ಮೈಸೂರಿನ ವಿವಿಧ ಬಡಾವಣೆ ಹಾಗೂ ಹೊರವಲಯದಲ್ಲಿ ಒಂದೆಡೆ ಕಾಲಕಳೆಯುತ್ತಿದ್ದ ಕಾರ್ಮಿಕರನ್ನು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು.
ನಿರಾತಂಕದಿಂದ ಹೋಗಿ ಬನ್ನಿ: ಡಿಸಿ
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಿದರು. ಪುರುಷರು, ಮಹಿಳೆಯರು ಹಾಗೂ ಪುಟ್ಟ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಸುರಕ್ಷಿತವಾಗಿ ನಿಮ್ಮೂರಿಗೆ ಸೇರುತ್ತೀರಿ. ಆತಂಕಕ್ಕೆ ಒಳಗಾಗದೆ ಪ್ರಯಾಣಿಸಿ ಎಂದು ಸಲಹೆ ನೀಡಿದರು. ರೈಲ್ವೆ ಇಲಾಖೆಯ ಎಡಿಆರ್‌ಎಂ ಶ್ರೀನಿವಾಸಲು, ವಾಣಿಜ್ಯ ಉಪನಿಬಂಧಕ ಡಾ.ಯತೀಶ್ ಇತರರು ಉಪಸ್ಥಿತರಿದ್ದರು.
ಆರೋಗ್ಯ ತಪಾಸಣೆ: ಬೆಳಗ್ಗೆ 8ರಿಂದಲೇ ಲಗ್ಗೇಜ್ ಹೊತ್ತು ಬಂದ ಕಾರ್ಮಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ಯಾನ್ ಮಾಡಿ ತಪಾಸಣೆಗೊಳಪಡಿಸಿದರು. ಆರೋಗ್ಯದ ಕುರಿತು ದೃಢೀಕರಣ ಪ್ರಮಾಣ ಪತ್ರ ನೀಡಲಾಯಿತು. ರೈಲ್ವೆ ಇಲಾಖೆಯ ಕೌಂಟರ್‌ನಲ್ಲಿ ಆಧಾರ್ ಕಾರ್ಡ್, ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ್ದ ಸಂಖ್ಯೆ ಹಾಗೂ ವಿಳಾಸದ ದಾಖಲೆ ಹಾಜರು ಪಡಿಸಿದ ನಂತರವಷ್ಟೇ ಟಿಕೆಟ್ ಕೌಂಟರ್ ಬಳಿ ಬಿಡಲಾಯಿತು. ಟಿಕೆಟ್ ಪಡೆದವರನ್ನು ಬೆಳಗ್ಗೆ 9ರಿಂದಲೇ ಬೋಗಿಯಲ್ಲಿ ಕೂರಿಸಲಾಯಿತು. ಎಲ್ಲ 1,391 ಪ್ರಯಾಣಿಕರು ತಪಾಸಣೆಗೊಳಪಟ್ಟು ಟಿಕೆಟ್ ಪಡೆದು ನಿಗದಿ ಮಾಡಿದ ಬೋಗಿಯಲ್ಲಿ ಆಸೀನರಾದ ಬಳಿಕವಷ್ಟೇ ಮಧ್ಯಾಹ್ನ 2.15ಕ್ಕೆ ಇಲ್ಲಿಂದ ವಿಶೇಷ ರೈಲು ಪ್ರಯಾಣ ಬೆಳೆಸಿತು. ಈ ರೈಲು 18 ಸ್ಲೀಪರ್, 4 ಜನರಲ್, 2 ಎಸ್‌ಎಲ್‌ಆರ್(ಗಾಡ್‌ಬ್ರೇಕ್) ಕೋಚ್ ಸೇರಿ 24 ಬೋಗಿ ಹೊಂದಿತ್ತು. ಪ್ರತಿ ಬೋಗಿಯಲ್ಲೂ 72 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಮೈಸೂರು-ಬೆಂಗಳೂರು, ಧರ್ಮವರಂ, ನಾಗಪುರ, ಜಾನ್ಸಿ, ಲಕ್ನೋ ಮಾರ್ಗವಾಗಿ ಸುಮಾರು 2500 ಕಿ.ಮೀ. ಪ್ರಯಾಣ ಇದಾಗಿದೆ.
ಮಂಗಳವಾರ(ಮೇ 19) ಬೆಳಗ್ಗೆ 7ಕ್ಕೆ ಅಲ್ಲಿಗೆ ತಲುಪಲಿದೆ. ಎಲ್ಲ ಕೋಚ್‌ಗಳಲ್ಲೂ ಪ್ರಯಾಣಿಕರು ಮಲಗಿಕೊಂಡು ಹೋಗುವ ವ್ಯವಸ್ಥೆಯಿದೆ. ದೈಹಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಇದೆ. ಪ್ರಯಾಣಿಕರ ಭದ್ರತೆಗಾಗಿ 6 ಭದ್ರತಾ ಸಿಬ್ಬಂದಿ, 6 ಜನ ಟಿಟಿ ನಿಯೋಜಿಸಲಾಗಿದೆ. ಮಾರ್ಗಮಧ್ಯೆ ಪ್ರಯಾಣಿಕರಿಗೆ ಐಆರ್‌ಸಿಟಿಸಿ ಉಚಿತವಾಗಿ ತಿಂಡಿ, ಊಟದ ವ್ಯವಸ್ಥೆ ಮಾಡಲಿದೆ.
ಅತಿಥಿ ಸತ್ಕಾರ: ಅಶೋಕಪುರಂ ನಿಲ್ದಾಣದ ಬಳಿ ಕಾರ್ಮಿಕರಿಗೆ ರೋಟರಿ ಕ್ಲಬ್ ಸದಸ್ಯರು ಉಪಾಹಾರ, ನೀರಿನ ಬಾಟಲ್ ವಿತರಿಸಿದರು. ಜಿಲ್ಲಾಡಳಿತ ಮಧ್ಯಾಹ್ನದ ಊಟಕ್ಕೆ ರೈಸ್‌ಬಾತ್ ಹಾಗೂ ನೀರಿನ ಬಾಟಲ್ ನೀಡಿ ಸತ್ಕರಿಸಿತು.