ಜಿಲ್ಲೆ

Mysuru Dasara : ಈ ಬಾರಿಯ ದೀಪಾಲಂಕಾರದಲ್ಲಿ ಝಗಮಗಿಸಲಿವೆ ಸಾಂಸ್ಕೃತಿಕ ನಗರಿ!

ಬೆಂಗಳೂರು: ದಸರಾ ಮಹೋತ್ಸವದ ವೇಳೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಈ ಬಾರಿಯೂ ವಿದ್ಯುದ್ದೀಪಗಳಿಂದ ಝಗಮಗಿಸಲಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ನೇತೃತ್ವದಲ್ಲಿ ಸೋಮವಾರ ಬೆಳಕು ಭವನದಲ್ಲಿ ನಡೆದ ಸಭೆಯಲ್ಲಿ, ದಸರಾ ಉತ್ಸವ ಆರಂಭಕ್ಕೆ ಒಂದು ದಿನ‌ ಮೊದಲು ಅಂದರೆ‌ ಅ. 2ರಿಂದ 21 ದಿನಗಳ ಕಲಾ ದೀಪಾಲಂಕಾರ ಮಾಡಲು ‌ನಿರ್ಧರಿಸಲಾಗಿದೆ.

ಅಲ್ಲದೆ, ವಿದ್ಯುತ್ ದೀಪಾಲಂಕಾರ ಈ ಬಾರಿಯ ದಸರಾಗೆ ಮತ್ತಷ್ಟು ಕಳೆ ಕಟ್ಟಬೇಕು. ಈ ವಿಚಾರವಾಗಿ ಸೆಸ್ಕ್‌ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

135 ಕಿ.ಮೀ. ರಸ್ತೆಗೆ ದೀಪಾಲಂಕಾರ: ನಗರದ ಪ್ರಮುಖ ರಸ್ತೆಗಳ ಅರಮನೆ ಸುತ್ತ ಸೇರಿದಂತೆ ಸಯ್ಯಾಜಿರಾವ್‌ ರಸ್ತೆ, ಬಿಎನ್‌ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್‌ ವಿಕ್ಟರ್‌ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳನ್ನು ಸೇರಿಸಿಕೊಂಡು 135 ಕಿ.ಮೀ. ಉದ್ದದ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ 119 ವೃತ್ತಗಳಲ್ಲಿದೀಪಾಲಂಕಾರ ಮಾಡಲಾಗುತ್ತಿದೆ.

ನಗರದ ದೊಡ್ಡಕೆರೆ ಮೈದಾನ, ಕೆ.ಆರ್‌.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್‌), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್‌, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್‌ ದೀಪಗಳಿಂದಲೇ ಮಾಡಿರುವ 30ಕ್ಕೂ ಹೆಚ್ಚು ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ.

ಹಸಿರು ಚಪ್ಪರದ ಅದ್ಧೂರಿ ಸುಸ್ವಾಗತ: ಹಸಿರು ಚಪ್ಪರ, ಸುಸ್ವಾಗತ, ವಿವಿಧ ಕಮಾನುಗಳು, ನಿಗಮದ ಕಚೇರಿಗಳ ದೀಪಾಲಂಕಾರ, ಛಾಯಾಗ್ರಹಣ ಮತ್ತು ಸಮಾರಂಭಗಳ ವೇದಿಕೆ ಮತ್ತಿತರೆಡೆ ವಿದ್ಯುತ್ ದೀಪಾಲಾಂಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.