ಜಿಲ್ಲೆ

ನವರಾತ್ರಿ ಮುಕುಟ ಮೈಸೂರು ದಸರಾ: ಚಾಮುಂಡಿ ನಾಡದೇವತೆಯಾಗಿದ್ದು ಹೇಗೆ?

ರಮೇಶ್​ ಕುಮಾರ್​​ ಬಿ ಎಡಮೋಳೆ

ಶಕ್ತಿ ಸ್ವರೂಪಿಣಿಯಾದ ಮಾತೆಯನ್ನು ಪೂಜಿಸುವ ಶರನ್ನವರಾತ್ರಿ ದೇಶಾದ್ಯಂತ ನಡೆಯುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವವು ಪೌರಾಣಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ. ‘ನಾಡ ಹಬ್ಬ ಮೈಸೂರು ದಸರೆ’ಯ ಕುರಿತು ಪುರಾತತ್ವ ಮತ್ತು ಇತಿಹಾಸಜ್ಞ ಡಾ. ಶೆಲ್ವಪಿಳ್ಳೆ ೖ ಅಯ್ಯಂಗಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಎಸ್. ರಂಗರಾಜು ಹಾಗೂ ಮೈಸೂರಿನ ಕಥೆಗಳು ಖ್ಯಾತಿಯ ಧಮೇಂದ್ರ ಕುಮಾರ್ ಅವರು ‘ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಆಯೋಜಿಸಿದ್ದ ‘ಕ್ಲಬ್​ಹೌಸ್ ಆನ್​ಲೈನ್ ಆಡಿಯೋ ಸಂವಾದ’ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಿದ್ದಾರೆ.

ವೇದಗಳ ಕಾಲದಿಂದಲೂ ಉಲ್ಲೇಖ

| ಶೆಲ್ವಪಿಳ್ಳೈ ಅಯ್ಯಂಗಾರ್

ಪ್ರಕೃತಿ ಪೂಜೆಯ ಅಂಗವಾಗಿ, ಅದರಲ್ಲೂ ಮಾತೃಸ್ವರೂಪಿಣಿಯಾದ ದೇವಿಯನ್ನು ನವರಾತ್ರಿಯಲ್ಲಿ ಪೂಜಿಸುತ್ತೇವೆ. ದುರ್ಗಾ ಮಾತೆಯ ಕುರಿತು ವೇದಗಳ ದುರ್ಗಾಸೂಕ್ತದಲ್ಲಿ ಮೊದಲು ವಿವರಿಸಲಾಗಿದೆ. ಕ್ರಿ.ಪೂ. 1500ರ ಕಾಲದಲ್ಲಿ ವೇದಗಳು ನಿರ್ವಣವಾದವು ಎಂದು ಆಧುನಿಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಈಗಿನವರೆಗಿನ ಕ್ರಿ.ಶ. 2021 ವರ್ಷವನ್ನು ಸೇರಿಸಿದರೆ ಸುಮಾರು ಮೂರೂವರೆ ಸಾವಿರ ವರ್ಷದ ಹಿಂದಿನಿಂದಲೂ ಮಾತೆಯ ಧಾರ್ವಿುಕ ಆಚರಣೆ ಇದೆ ಎಂದಾಯಿತು. ಐತಿಹಾಸಿಕ ರೂಪದಲ್ಲಿ ನೋಡುವುದಾದರೆ, ಹರಪ್ಪ ಮತ್ತು ಮೊಹೆಂಜೋದಾರೊದಲ್ಲಿ ಉತ್ಖನನದ ವೇಳೆ, ಮಾತೃ ದೇವತೆಯನ್ನು ಪ್ರತಿನಿಧಿಸುವ ಅನೇಕ ಟೆರಾಕೋಟ ಮಾದರಿಗಳು ಸಿಕ್ಕಿವೆ. ರಾಮಾಯಣ ಕಾಲದಲ್ಲಿ ದುರ್ಗೆಯ ಸ್ತುತಿಗಳು ಹೆಚ್ಚಾಗಿ ಕಂಡುಬರುತ್ತವೆ. ನಂತರದಲ್ಲಿ, ಕ್ರಿ.ಪೂ. 600ರ ಕಾಲದಲ್ಲಿ ಅಂದರೆ ಮಹಾಭಾರತದಲ್ಲಿ ದುರ್ಗೆಯ ಕುರಿತು ಹೆಚ್ಚು ಪ್ರಸ್ತಾಪವಾಗಿದೆ. ಮಹಿಷಾಸುರ, ಚಂಡಮುಂಡಾಸುರ ಮುಂತಾದ ಅಸುರರ ಉದಾಹರಣೆಗಳು, ದುರ್ಗೆಯು ಅವರನ್ನು ಸಂಹರಿಸಿದ ಉದಾಹರಣೆಗಳು ದೊರಕುತ್ತವೆ. ಆಯುಧ ಪೂಜೆ ಉಲ್ಲೇಖ ಸಹ ಮಹಾಭಾರತದಲ್ಲಿ ಲಭಿಸುತ್ತದೆ. ಪಾಂಡವರು ತಮ್ಮ ಆಯುಧಗಳನ್ನು ಬೊಂಬೆಯ ರೂಪದಲ್ಲಿ ಬನ್ನಿ ಮರದಲ್ಲಿ ಅಡಗಿಸಿಟ್ಟಿದ್ದರು. ಅಜ್ಞಾತವಾಸ ಮುಕ್ತಾಯದ ನಂತರ ಆಯುಧ ಪೂಜೆಯ ದಿನ ದುರ್ಗೆಯನ್ನು ಸ್ತುತಿಸಿ ಆಯುಧಗಳನ್ನು ಪಡೆದರು ಎನ್ನಲಾಗುತ್ತದೆ. ನಂತರ ಬಂದ ಪುರಾಣ ಕಾಲದಲ್ಲಿ ದುರ್ಗೆಯ ಉಲ್ಲೇಖವಿದೆ. ದೇವಿಯ ಕುರಿತು ಸಂಪೂರ್ಣವಾಗಿ ವಿವರಿಸುವ ದೇವೀ ಭಾಗವತ ಎಂಬ ಪುರಾಣವಿದೆ. ದೇವಿಯಿಂದಲೇ ಜಗತ್ತು ಸೃಷ್ಟಿಯಾಯಿತು ಎಂದು ಅದರಲ್ಲಿ ತಿಳಿಸಲಾಗಿದೆ. ಉಳಿದಂತೆ ಎಲ್ಲ 18 ಪುರಾಣಗಳಲ್ಲೂ ದೇವಿಯ ಉಲ್ಲೇಖವಿದೆ. ಮಹಿಷಾಸುರನಿಂದ ಆದ ಸಮಸ್ಯೆಗಳು ಹಾಗೂ ದೇವಿ ಕೊಟ್ಟ ಉತ್ತರ ಅಲ್ಲಿ ಸಿಗುತ್ತದೆ. ಆಚರಣೆಯ ಹಿನ್ನೆಲೆ ನೋಡುವುದಾದರೆ, ನಿರ್ಣಯ ಸಿಂಧು, ಧರ್ಮ ಸಿಂಧು, ಸ್ಮೃತಿ ಗ್ರಂಥಗಳಲ್ಲಿ 10 ದಿನದ ನವರಾತ್ರಿ ಆಚರಣೆ ಕುರಿತು ತಿಳಿಸಲಾಗಿದೆ. ಮೊದಲ ದಿನ ರಾತ್ರಿ ಘಟ ಸ್ಥಾಪಿಸಿ ದೇವಿ ಆರಾಧನೆ ಮಾಡಲಾಗುತ್ತದೆ. ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರೀ ಎಂಬಂತೆ ನವದುರ್ಗೆಯರ ಪೂಜೆ ಭಾರತದ ಉತ್ತರದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ದಕ್ಷಿಣದಲ್ಲಿ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಚಾಮುಂಡಿ ಬೆಟ್ಟದಲ್ಲಿ ಸಪ್ತ ಮಾತೃಕೆಯರ ಆರಾಧನೆ ಇರುತ್ತದೆ. ಕಡೆಯ ಮೂರು ದಿನ ಮಹಾಕಾಳಿ, ಮಹಾಸರಸ್ವತಿ ಹಾಗೂ ಮಹಾಲಕ್ಷ್ಮೀ ಪೂಜೆ ನೆರವೇರುತ್ತದೆ. ಮೈಸೂರಿನ ಅರಮನೆಯಲ್ಲಿ ತಲಾ ಮೂರು ದಿನದಂತೆ ಕ್ರಮವಾಗಿ ಮಹಾಕಾಳಿ, ಮಹಾಸರಸ್ವತಿ ಹಾಗೂ ಮಹಾಲಕ್ಷ್ಮಿ ಪೂಜೆ ನೆರವೇರುತ್ತದೆ. 9 ದಿನ ದೇವೀ ವೈಭವವಾದರೆ 10ನೇ ದಿನ ವಿಜಯ ದಶಮಿಯಂದು ರಾಮನ ವೈಭವ ನಡೆಯುತ್ತದೆ. ಪರಸ್ಪರರು ಬನ್ನಿ ಮುಡಿದುಕೊಂಡು ಸಹಬಾಳ್ವೆಯ ಸಂಕಲ್ಪ ಮಾಡುತ್ತೇವೆ. ಶೈವ, ವಿಷ್ಣವ ಮುಂತಾದ ಪಂಥಗಳು ವಿಭಿನ್ನವಾಗಿ ನವರಾತ್ರಿಯನ್ನು ಆಚರಿಸುವೆ. ವೈಷ್ಣವರು 10 ದಿನವೂ ರಾಮಾಯಣ ಪಾರಾಯಣ ಮಾಡುತ್ತಾರೆ. ಶೈವರು ಶಿವ ಪುರಾಣ, ರುದ್ರ ಅಭಿಷೇಕಗಳನ್ನು ಮಾಡುತ್ತಾರೆ. ಶಾಕ್ತರು ದೇವೀ ಭಾಗವತ ಹಾಗೂ ದೇವಿ ಸಪ್ತಶತಿ ಪಾರಾಯಣ, ಚಂಡಿ ಹೋಮ ಮಾಡುತ್ತಾರೆ.

ಭಾರತದಲ್ಲಿ ಕೆಲವು ಹಬ್ಬಗಳು ಪ್ರಾದೇಶಿಕವಾಗಿ ಆಚರಿಸಲ್ಪಡುತ್ತವೆ. ದೀಪಾವಳಿಯಂತಹ ಉತ್ಸವಗಳು ದೇಶದೆಲ್ಲೆಡೆ ಆಚರಿಸಲ್ಪಡುತ್ತವೆ. ಅದರಂತೆ, ದೇಶಾದ್ಯಂತ ಎಲ್ಲರೂ ಆಚರಿಸುವ ಉತ್ಸವಗಳಲ್ಲಿ ನವರಾತ್ರಿಯೂ ಒಂದು.

ಹಿಂದಿನ, ಈಗಿನ ದಸರಾ ಉತ್ಸವದ ವ್ಯತ್ಯಾಸಗಳೇನು?

ಕಾಲ ಕಾಲಕ್ಕೆ ದಸರೆಯ ಸ್ವರೂಪದಲ್ಲಿ ಬದಲಾವಣೆ ಆಗುತ್ತಿದೆ. 1336ರಿಂದ 1565ರವರೆಗೆ ನಡೆದ ವಿಜಯನಗರದ ಹಂಪಿ ದಸರಾನೇ ಬೇರೆ, 1610ರಿಂದ 1766ರವರೆಗೆ ನಡೆದ ಶ್ರೀರಂಗಪಟ್ಟಣದ ದಸರಾ ವೈಭವವೇ ಬೇರೆ. ಮೈಸೂರಿಗೆ ಸ್ಥಳಾಂತರಗೊಂಡ ಬಳಿಕ ದಸರಾ ಉತ್ಸವದಲ್ಲಿ ಯೂರೋಪಿಯನ್ ಸಂಸ್ಕೃತಿ ಕಾಣಿಸಿಕೊಂಡಿತು. ಅದರ ಪರಿಕಲ್ಪನೆಯೇ ಪೊಲೀಸರ ಬ್ಯಾಂಡ್, ಪಥ ಸಂಚಲನ ಇತ್ಯಾದಿ. ಆದಾಗ್ಯೂ ಮೈಸೂರಿನ ಸಂಸ್ಕೃತಿ, ಪರಂಪರೆ ಮತ್ತು ರಾಜವೈಭವವನ್ನು ಎತ್ತಿ ಹಿಡಿಯುವಂತೆ ದಸರಾ ಆಯೋಜಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಸಾಧನೆ ಹೇಳುವ ಟ್ಯಾಬ್ಲೋಗಳನ್ನು ಅಳವಡಿಸಲಾಗುತ್ತಿದೆ. ಯಥಾ ಪ್ರಕಾರ ಕಲಾ ತಂಡಗಳು ಬರುತ್ತಿವೆಯಾದರೂ, ಹಿಂದಿನಂತೆ ಕೇರಳ, ತಮಿಳುನಾಡು ಮುಂತಾದ ರಾಜ್ಯಗಳ ಕಲಾ ಪ್ರದರ್ಶನಗಳು ಈಗ ಕಾಣಿಸುತ್ತಿಲ್ಲ. ಇಂದ್ರಜಾಲ, ಮಹೇಂದ್ರಜಾಲಗಳು ಇಲ್ಲ. ಸರ್ಕಾರ ದಸರಾ ಉತ್ಸವದಲ್ಲಿ ತನ್ನ ಸಾಧನೆ ಹೇಳುವ ಬದಲು ಸಂಸ್ಕೃತಿಯನ್ನು ಪರಿಚಯಿಸುವ ಕಡೆ ಗಮನ ಹರಿಸಬೇಕು. ಸ್ಥಳೀಯ ಆಹಾರ, ಸಂಸ್ಕೃತಿ, ಕಲೆ, ವಸ್ತ್ರ, ವಸ್ತು ವಿಷಯಗಳ ಪರಿಚಯ ಮಾಡಿಕೊಡುವ ಕಾರ್ಯ ಆಗಬೇಕು.

ಚಾಮುಂಡಿ ನಾಡದೇವತೆಯಾದ ಬಗೆ

ಚಾಮುಂಡಿ ಸ್ಥಾಪನೆ, ಬಲಿ, ಪೂಜಾ ಪದ್ಧತಿಗಳ ಕುರಿತು ವಿಜಯನಗರ ಸಮಯದ ಇತಿಹಾಸದಲ್ಲಿ ಉಲ್ಲೇಖವಿದೆ. ಕಂಠೀರವ ನರಸರಾಜ ವಿಜಯ ಎಂಬ ಕೃತಿಯಲ್ಲಿ ಶ್ರೀರಂಗಪಟ್ಟಣದ ದಸರಾ ಉಲ್ಲೇಖವಿದೆ. ನಂತರದ ಮೈಸೂರು ದಸರಾ ದಾಖಲೆಯಲ್ಲಿ ಮತ್ತಷ್ಟು ಸ್ಪಷ್ಟವಾಗಿದೆ. ಅಂಬಾರಿಯಲ್ಲಿ ಅರಸರ ಬದಲಾಗಿ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆಯು ದಸರಾದ ವಿಶೇಷಗಳಲ್ಲೊಂದು. ಚಾಮುಂಡಿ ಬೆಟ್ಟಕ್ಕೆ ಮೊದಲಿಗೆ ಮಹಾಬಲಬೆಟ್ಟ ಎನ್ನುವ ಹೆಸರಿತ್ತು. ವಿಷ್ಣುವರ್ಧನನ ಶಾಸನದಲ್ಲಿ ಮಾರ್ಬಲ ತೀರ್ಥ, ಅಂದರೆ ಮಹಾಬಲ ತೀರ್ಥ ಎಂಬ ಉಲ್ಲೇಖವಿದೆ. ಆಗಿನ ಸಮಯದಲ್ಲಿ ಎಲ್ಲಿಯೂ ಚಾಮುಂಡಿಯ ಉಲ್ಲೇಖ ಸಿಗುವುದಿಲ್ಲ. 1662ರಲ್ಲಿ, ದೊಡ್ಡದೇವರಾಜ ಒಡೆಯರ್ ಅವರ ಕಾಲದಲ್ಲಿ ಚಾಮುಂಡಿ ಬೆಟ್ಟ ಪ್ರಸಿದ್ಧಿ ಆಗುತ್ತ ಸಾಗಿತು. 1829ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ದೇವಾಲಯದ ಗೋಪುರ ಕಟ್ಟಿಸಿ ಹೊಸ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದರು. ಆಗ ಬೆಟ್ಟ ಹೆಚ್ಚು ಜನಪ್ರಿಯವಾಯಿತು. ತಾಯಿ ಚಾಮುಂಡಿಗೆ, 27 ನಕ್ಷತ್ರಗಳನ್ನು ಪ್ರತಿನಿಧಿಸುವ ನಕ್ಷತ್ರಮಾಲಿಕಾ ಹಾಗೂ ಪಾಂಚಜನ್ಯ ಶಂಖವನ್ನು ನೀಡಿದರು. ಚಾಮುಂಡಿ ದೇವಿಗೆ ವಿಶೇಷ ರತ್ನಾಭರಣಗಳನ್ನು ಮೈಸೂರು ಮಹಾರಾಜರು ಮಾಡಿಸಿದ್ದಾರೆ. ಪ್ರಾಚೀನ ಕಾಲದ ಆಭರಣಗಳಂತೆಯೇ ಆಭರಣಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಮಾಡಿಸಿಕೊಟ್ಟರು. ಈಗಲೂ ಅವು ಅರಮನೆಯ ಒಡೆತನದಲ್ಲಿವೆ. ಅವುಗಳನ್ನು ದೇವಿಗೆ ತೊಡಿಸಿ ಸಂಭ್ರಮಿಸಲಾಗುತ್ತದೆ. ದೇವಾಲಯದ ಬಳಿಯಲ್ಲಿರುವ ಬೆಳ್ಳಿ ಮಂಟಪವನ್ನು ಜಯಚಾಮರಾಜ ಒಡೆಯರ್ ನೀಡಿದ್ದು ಎಂಬುದಕ್ಕೆ ಈಗಲೂ ಉಲ್ಲೇಖವಿದೆ. ನಂತರವೂ ಮೈಸೂರು ರಾಜಮನೆತನದ ಎಲ್ಲರೂ ಚಾಮುಂಡಿ ವೈಭವವನ್ನು ಹೆಚ್ಚಿಸಲು ಶ್ರಮಿಸಿದ್ದಾರೆ. ನಾಡಹಬ್ಬ ದಸರಾ ಎಂದು ಘೋಷಣೆ ಮಾಡಿದ ನಂತರ ಚಾಮುಂಡಿ ದೇವಿಯು ನಾಡದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.

ಈ ವೇಳೆಯಲ್ಲಿಯೇ ಏಕೆ ದಸರಾ ಆಚರಿಸಲಾಗುತ್ತದೆ?

ವರ್ಷಕ್ಕೆ ಎರಡು ನವರಾತ್ರಿ. ಒಂದು ವಸಂತ ನವರಾತ್ರಿ. ರಾಮನ ಹುಟ್ಟುಹಬ್ಬದ ಅಂಗವಾಗಿ 9 ದಿನ ಆಚರಣೆ. ಮತ್ತೊಂದು ಆಶ್ವಿಜ ಮಾಸದ ಶರವನ್ನವರಾತ್ರಿ. ನವದುರ್ಗೆಯರ 9 ದಿನಗಳ ಉತ್ಸವ. ವರ್ಷ ಕಾಲ ಮುಗಿದು ಕಾರ್ತೀಕ ಮಾಸದ ಕಡೆ ಹೋಗುತ್ತೇವೆ. ಇದು ಅನೇಕ ಹೊಸ ಧಾನ್ಯಗಳು ಬರುವ ಕಾಲ. ಅತ್ಯಂತ ವೇಗವಾಗಿ ಎಲ್ಲವನ್ನೂ ತಿಂದರೆ ಶರೀರದ ಮೇಲೆ ಪರಿಣಾಮ ಬೀರಬಹುದು ಎಂದು ಅರೋಗ್ಯದ ದೃಷ್ಟಿಯಿಂದ ಉಪವಾಸ ವ್ರತಗಳನ್ನು ಪ್ರಕೃತಿಯಲ್ಲಿ ಜೋಡಿಸಲಾಗಿದೆ. ಹೊಸ ಬೆಳೆ ಬೆಳೆಯುವ ಕಾಲ ಆಗಿರುವುದರಿಂದ ಪ್ರಕೃತಿ ಬದಲಾವಣೆ ಕೂಡ ಹಬ್ಬವಾಗಿ ಆಚರಣೆಗೊಳ್ಳುತ್ತಿವೆ.