ಮೈಸೂರು: ಸ್ವಚ್ಛತೆ ಮತ್ತು ನೈರ್ಮಲ್ಯ ನಿರ್ವಹಣೆಯಲ್ಲಿ ದೇಶದ ಗಮನ ಸೆಳೆದಿರುವ ಸಾಂಸ್ಕೃತಿಕ ನಗರಿ ಮೈಸೂರು, ಸ್ವಚ್ಛ ಸರ್ವೇಕ್ಷಣ್ನಲ್ಲಿ ತನ್ನ ಸಾಧನೆಯನ್ನು ಮುಂದುವರಿಸಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗೆ ಈ ಬಾರಿಯೂ ಮೈಸೂರು ಆಯ್ಕೆಯಾಗಿದ್ದು, ನಗರ ಪಾಲಿಕೆಗೆ ಪ್ರಶಸ್ತಿ ಸ್ವೀಕರಿಸಲು ಅಧಿಕೃತ ಆಹ್ವಾನ ಬಂದಿದೆ. ಆದರೆ, ಈ ಬಾರಿ ಮೈಸೂರು ಯಾವ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ ಹಾಗೂ ರಾಷ್ಟ್ರಮಟ್ಟದಲ್ಲಿ ಯಾವ ಸ್ಥಾನ ಗಳಿಸಿದೆ ಎಂಬ ಕುತೂಹಲ ನಗರವಾಸಿಗಳಲ್ಲಿ ಮೂಡಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನ.11ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಗರ ಪಾಲಿಕೆಗೆ ಅಧಿಕೃತ ಆಹ್ವಾನ ದೊರೆತಿದೆ.
ಆದರೆ, ಮೈಸೂರಿಗೆ ಯಾವ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ, ರಾಷ್ಟ್ರಮಟ್ಟದಲ್ಲಿ ನಗರದ ಸಾಧನೆಯ ಮಟ್ಟವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಥವಾ ಅದಕ್ಕೂ ಮುನ್ನ ಕೇಂದ್ರ ಸಚಿವಾಲಯದಿಂದ ಅಧಿಕೃತ ವಿವರ ಪ್ರಕಟವಾದ ಬಳಿಕವಷ್ಟೇ ಈ ಕುರಿತ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಬಾರಿ ‘ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ’ ಎಂಬ ಘೋಷವಾಕ್ಯದೊ ಂದಿಗೆ ಸ್ವಚ್ಛ ಸರ್ವೇಕ್ಷಣ್ ನಡೆಸಿತ್ತು. ನಗರಗಳ ಸ್ವಚ್ಛತಾ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸ್ವಚ್ಛತಾ ವ್ಯವಸ್ಥೆಯ ಪರಿಣಾಮಕಾರಿತ್ವ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ನಗರಗಳ ಸಾಧನೆಯನ್ನು ಮೌಲ್ಯಮಾಪನ ಮಾಡಲಾಗಿದೆ.
ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಮರುಸಂಸ್ಕರಣೆ) ಎಂಬ ಪರಿಕಲ್ಪನೆ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ನಡೆದಿತ್ತು. ಈ ಬಾರಿಯೂ ಕಳೆದ ಸಾಲಿನಂತೆ ಒಟ್ಟು 12,500 ಅಂಕಗಳಿಗೆ ನಗರಗಳ ನಡುವೆ ಸ್ಪರ್ಧೆ ನಡೆದಿತ್ತು. ಸ್ವಚ್ಛತೆಯನ್ನು ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿ ನೋಡದೆ, ಸಾರ್ವಜನಿಕರ ಸಹಭಾಗಿತ್ವದ ಮೂಲಕ ನಗರವನ್ನು ಸ್ವಚ್ಛವಾಗಿಡುವ ಆಶಯಕ್ಕೆ ಈ ಬಾರಿ ಒತ್ತು ನೀಡಲಾಗಿತ್ತು.
ನಂ.1 ಸ್ಥಾನದಿಂದ ಸೂಪರ್ ಸ್ವಚ್ಛ ಲೀಗ್ವರೆಗೆ:
ಸ್ವಚ್ಛ ಸರ್ವೇಕ್ಷಣ್ನಲ್ಲಿ ಮೈಸೂರು ಈ ಹಿಂದೆ ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. 2015 ಮತ್ತು 2016ರಲ್ಲಿ ಸತತ ಎರಡು ವರ್ಷ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದೇಶದ ಗಮನ ಸೆಳೆದಿತ್ತು. ಬಳಿಕವೂ ಉತ್ತಮ ಸ್ಥಾನಗಳನ್ನು ಕಾಯ್ದುಕೊಂಡಿದ್ದ ನಗರ, ಸ್ವಚ್ಛತಾ ಅಭಿಯಾನದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ.
2017ರಲ್ಲಿ ಐದನೇ ಸ್ಥಾನ, 2018ರಲ್ಲಿ ಎಂಟನೇ ಸ್ಥಾನ, 2019ರಲ್ಲಿ ಮೂರನೇ ಸ್ಥಾನ ಹಾಗೂ 2020ರಲ್ಲಿ ಐದನೇ ಸ್ಥಾನ ಗಳಿಸಿತ್ತು. 2021ರಲ್ಲಿ 11ನೇ ಸ್ಥಾನ ಮತ್ತು 2022ರಲ್ಲಿ ಎಂಟನೇ ಸ್ಥಾನ ಪಡೆದಿದ್ದ ಮೈಸೂರು, 2023ರಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು.
2024-25ನೇ ಸಾಲಿನಲ್ಲಿ ನಗರವು ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿಗೆ ಭಾಜನವಾಗಿತ್ತು. ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ನಗರಗಳನ್ನು ಸಾಮಾನ್ಯ ರ್ಯಾಂಕಿಂಗ್ ಪಟ್ಟಿಯ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹೀಗಾಗಿ, ಕಳೆದ ವರ್ಷ ಮೈಸೂರಿನ ಸ್ಥಾನವನ್ನು ಸಾಮಾನ್ಯ ರ್ಯಾಂಕಿಂಗ್ ಆಧಾರದಲ್ಲಿ ಪರಿಗಣಿಸಲಾಗಿರಲಿಲ್ಲ.
ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಮೈಸೂರು, ಸ್ವಚ್ಛತಾ ಕ್ಷೇತ್ರದಲ್ಲಿ ತನ್ನ ಹಿಂದಿನ ಹೆಗ್ಗಳಿಕೆಯನ್ನು ಮರಳಿ ಪಡೆಯುವ ನಿರೀಕ್ಷೆ ಹೊಂದಿದೆ.
ನಗರವು ಈ ಬಾರಿಯೂ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಇದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಪ್ರಶಸ್ತಿಯ ವಿಭಾಗದ ವಿವರ ಇನ್ನಷ್ಟೇ ಅಧಿಕೃತವಾಗಿ ಪ್ರಕಟವಾಗಬೇಕಿದೆ. ಈ ಸಾಧನೆಗಾಗಿ ಶ್ರಮಿಸಿದ ಪೌರಕಾರ್ಮಿಕರು, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮೈಸೂರಿನ ನಾಗರಿಕರಿಗೆ ಅಭಿನಂದನೆಗಳು.
ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು
ನಗರವು ಪ್ರತಿ ಬಾರಿ ಸ್ವಚ್ಛತಾ ಪ್ರಶಸ್ತಿ ಪಡೆಯಲು ಪೌರಕಾರ್ಮಿಕರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವೇ ಪ್ರಮುಖ ಕಾರಣ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ಈ ಬಾರಿ ಯಾವ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ನ.11ರಂದು ಈ ಕುರಿತು ಮಾಹಿತಿ ಬಹಿರಂಗಗೊಳ್ಳಲಿದೆ.
ಎಂ.ಕೆ. ಸವಿತಾ, ಆಯುಕ್ತರು, ನಗರ ಪಾಲಿಕೆ