ಜಿಲ್ಲೆ

ಪಾಸ್‌ಪೋರ್ಟ್ ಕೇಂದ್ರ ಜಿಲ್ಲಾಕೇಂದ್ರದಲ್ಲಿ ತೆರೆಯಲಿ: ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಒತ್ತಾಯ

ಮಂಡ್ಯ: ಮದ್ದೂರಿನಲ್ಲಿರುವ ಪಾಸ್‌ಪೋರ್ಟ್ ಕೇಂದ್ರವನ್ನು ಜಿಲ್ಲಾಕೇಂದ್ರದಲ್ಲಿ ತೆರೆಯಬೇಕೆಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಒತ್ತಾಯಿಸಿದರು.

ಕೇಂದ್ರವನ್ನು ಮಂಡ್ಯ ಜಿಲ್ಲೆಗೆ ತಂದಿರುವುದು ಸ್ವಾಗತಾರ್ಹ ವಿಚಾರ. ಆದರೆ ಈ ಕಚೇರಿ ಸಹಜವಾಗಿ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸುವುದು ಸೂಕ್ತ. ಆದ್ದರಿಂದ ಈ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮದ್ದೂರಿನಲ್ಲಿ ಪಾಸ್‌ಪೋರ್ಟ್ ಕೇಂದ್ರವಿರುವುದರಿಂದ ಇತರೆ ತಾಲೂಕುಗಳಿಂದ ಸಾರ್ವಜನಿಕರು ಅಲ್ಲಿಗೆ ಹೋಗಲು ಸಾರಿಗೆ ಸೌಲಭ್ಯಗಳಿಲ್ಲ. ಜತೆಗೆ ನೇರವಾದ ಸಾರಿಗೆ ಸಂಪರ್ಕದ ಕೊರತೆ ಇದೆ. ಆದರೆ ಜಿಲ್ಲಾಕೇಂದ್ರಕ್ಕೆ ನೇರ ಸಾರಿಗೆ ಸಂಪರ್ಕ ಇರುವುದರಿಂದ ಇಲ್ಲಿಯೇ ಕೇಂದ್ರವನ್ನು ಸ್ಥಾಪಿಸಬೇಕು. ಮಂಡ್ಯ ನಗರದಲ್ಲಿ ಆಡಳಿತಾತ್ಮಕ ಮತ್ತು ಸೇವಾ ವಲಯಕ್ಕೆ ಸಂಬಂಧಿಸಿದಂತೆ ಪ್ರಧಾನ ಕಚೇರಿಗಳು ಇವೆ. ಆದ್ದರಿಂದ ನಾಗರಿಕರಿಗೆ ಸೌಲಭ್ಯಗಳು ಸಿಗಲಿದೆ. ಹಾಗಾಗಿ ಸಾರ್ವಜನಿಕರ ಹಿತಾಸಕ್ತಿಗೆ ಅನುಕೂಲವಾಗುವಂತೆ ಮನವಿ ಮಾಡಿದರು.

ಒಕ್ಕೂಟದ ಗೌರವಾಧ್ಯಕ್ಷ ಎಸ್.ಕೃಷ್ಣ, ಗ್ರಾಮೀಣ ಕನ್ನಡಿಗರ ಸಂಘಟನೆ ಮುಖಂಡ ಅಭಿಗೌಡ, ಜೈ ಕರ್ನಾಟಕ ಪರಿಷತ್‌ನ ಎಸ್.ಪಿ.ನಾರಾಯಣಸ್ವಾಮಿ, ಜಿಲ್ಲಾ ರೈತ ಸಂಘದ ಶಿವಳ್ಳಿ ಚಂದ್ರಶೇಖರ್ ಇದ್ದರು.