ಮಂಡ್ಯ: ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯಲ್ಲಿ ಸುಮಾರು 40 ರಿಂದ 50 ಲಕ್ಷ ಟನ್ ಕಬ್ಬು ಬೆಳೆದು ನಿಂತಿದೆ. ಆದರೆ ಮಳೆಯಿಲ್ಲದೇ ಬೆಳೆ ಒಣಗುತ್ತಿರುವುದರಿಂದ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಮೈಷುಗರ್ ಕಾರ್ಖಾನೆ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಮನವಿ ಮಾಡಿದರು.
ನೀರಿಲ್ಲದೆ ಈಗಾಗಲೇ ಕಬ್ಬಿನ ಇಳುವರಿ ಕಡಿಮೆಯಾಗುತ್ತಿದೆ. ಇದೀಗ ನೀರು ಸಿಗದಿದ್ದರೆ ಉಳಿದ ಬೆಳೆಯೂ ಹಾಳಾಗಲಿದೆ. ಆದ್ದರಿಂದ ಕೆಆರ್‌ಎಸ್ ಡ್ಯಾಂನಿಂದ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ರೈತರನ್ನು ಕಾಪಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಜಿಲ್ಲೆಯ ಕಬ್ಬು ಬೆಳೆಗಾರರ ಹಿತಕಾಯಲು ಒಂದೇ ಬಾರಿಗೆ 50 ಕೋಟಿ ರೂಗಳನ್ನು ಮೈಷುಗರ್ ಕಾರ್ಖಾನೆಗೆ ಬಿಡುಗಡೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಎಂಎಲ್‌ಸಿ ದಿನೇಶ್ ಗೂಳಿಗೌಡ ಸೇರಿದಂತೆ ಶಾಸಕರನ್ನು ಅಭಿನಂದಿಸುತ್ತೇವೆ. ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಟನ್ ಒಪ್ಪಿಗೆ ನೋಂದಣಿಯಾಗಿದೆ. ಕಬ್ಬು ಕಟಾವು ಆಳು ತರಲು 2 ಕೋಟಿ ರೂ ನೀಡಬೇಕಿದೆ. ಪ್ರಮುಖವಾಗಿ ಕಾರ್ಖಾನೆಯಲ್ಲಿ ಡಿಸ್ಟಿಲರಿ ಶಿಥಿಲಗೊಂಡಿದ್ದು, ಕೇವಲ ಸಕ್ಕರೆ ಘಟಕ ಪ್ರಾರಂಭವಾದರೆ ಕಾರ್ಖಾನೆಗೆ ಲಾಭವಾಗುವುದಿಲ್ಲ. ಇದರ ಜತೆಗೆ ಎಥೆನಾಲ್ ಘಟಕವನ್ನು ಪ್ರಾರಂಭಿಸಲು ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಕೇಳಿಕೊಂಡರು.
ಇನ್ನು ಕಾರ್ಖಾನೆಯಿಂದ ಸೆಸ್ಕ್‌ಗೆ ನೀಡಬೇಕಿರುವ 41 ಕೋಟಿ ರೂ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಗೆ ನೀಡಬೇಕಿರುವ 19 ಕೋಟಿ ರೂಗಳನ್ನು ಮುಂದಿನ ಬಜೆಟ್‌ನಲ್ಲಿ ತೀರುವಳಿ ಮಾಡಬೇಕು. ಈ ಹಿಂದೆ ಮೈಷುಗರ್ ಅಧ್ಯಕ್ಷನಾಗಿದ್ದ ನಾಗರಾಜಪ್ಪ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರವಾಗಿರುವುದರಿಂದ ಲೋಕಾಯುಕ್ತ ಇಲಾಖೆಯಿಂದ ವರದಿ ಬಂದಿದೆ. ಈ ಸಂಬಂಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಹೊನ್ನಪ್ಪ, ಶಂಕರೇಗೌಡ, ಅಶೋಕ, ಚನ್ನೇಗೌಡ, ತುಳಸೀಧರ್ ಇದ್ದರು.