ಮಂಡ್ಯ: ಮೈಷುಗರ್ ಕಾರ್ಖಾನೆ ಮತ್ತು ಆರ್.ಬಿ ಟೆಕ್ ಕಂಪನಿ ನಡುವೆ ಒಳಒಪ್ಪಂದ ಮಾಡಿಕೊಂಡು ಎಲ್ಲ ಬಾಕಿಯನ್ನು ಚುಕ್ತಾ ಮಾಡಲಾಗಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಪಾರದರ್ಶಕವಾಗಿ ನಡೆಯುತ್ತಿರುವ ಕಾರ್ಖಾನೆ ವಿರುದ್ಧ ಜನರಿಗೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾದನೀಯ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು. ಕಾರ್ಖಾನೆ ಆರ್.ಬಿ ಟೆಕ್ ಕಂಪನಿಗೆ ಎಲ್ಲ ಬಾಕಿಯನ್ನು ಚುಕ್ತಾ ಮಾಡಿಲ್ಲ. 4.5 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದು, ಅವರಿಂದ ಆಗಿರುವ ನಷ್ಟವನ್ನು ಕರಾರಿನ ಪ್ರಕಾರ ಬಾಕಿ ನೀಡಬೇಕಾಗಿರುವ ಹಣದಲ್ಲಿ ಸರಿದೂಗಿಸಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. 2024-25ನೇ ಸಾಲಿನಲ್ಲಿ ಆರ್.ಬಿ ಟೆಕ್ ಕಂಪನಿಯೊಂದಿಗೆ ಪ್ರತಿ ಟನ್‌ಗೆ 900 ರೂ.ನಂತೆ 2.50 ಲಕ್ಷ ಮೆ.ಟನ್ ಕಬ್ಬು ನುರಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ 2 ಲಕ್ಷ ಟನ್ ಮಾತ್ರ ಅರೆಯಲಾಗಿದ್ದು, 18 ಲಕ್ಷ ರೂ.ಗಳನ್ನು ಆರ್.ಬಿ ಟೆಕ್‌ಗೆ ನೀಡಲಾಗಿದೆ. ಇನ್ನುಳಿದ 50 ಸಾವಿರ ಟನ್‌ಗೆ ಕೊಡಬೇಕಾದ ಹಣ 4.50 ಕೋಟಿ ರೂ.ಗಳನ್ನು ನೀಡಿಲ್ಲ. ಕರಾರು ಒಪ್ಪಂದದಂತೆ 4.50 ಕೋಟಿ ರೂ ಬಾಕಿ ಪಾವತಿ ಮಾಡಬೇಕಾಗಿದ್ದು, ಪ್ರಸಕ್ತ 2025-26ನೇ ಸಾಲಿನಲ್ಲಿ ಸರಿದೂಗಿಸಿಕೊಡುವುದಾಗಿ ತಿಳಿಸಿದರು. ಜೂನ್‌ನಲ್ಲಿ ಕಾರ್ಖಾನೆ ಆರಂಭ: 2025-26ನೇ ಸಾಲಿನಲ್ಲಿ ಮುಂದುವರಿಸುವ ಬಗ್ಗೆ ಕಂಪನಿಯ ತಕರಾರು ಇದ್ದರೂ ನಮ್ಮ ಕಾನೂನು ವಿಭಾಗದವರು ಗಮನಹರಿಸಲಿದ್ದಾರೆ. ಮಾತ್ರವಲ್ಲದೆ ನುರಿತ ಪರಿಣಿತರ ಜವಾಬ್ದಾರಿಯಿಂದ ಆರ್.ಬಿ ಟೆಕ್ ಕಂಪನಿಯಿಂದಲೇ ಜೂನ್ ಅಂತ್ಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡುತ್ತೇವೆ. 2024-25ನೇ ಸಾಲಿಗೆ ಬಿಬಿಎಂಪಿಗೆ ಕೊಡಬೇಕಾಗಿದ್ದ 6 ಕೋಟಿ ರೂ ಆಸ್ತಿ ತೆರಿಗೆಯನ್ನು ಒಂದೇ ಕಂತಿನ ಪಾವತಿ ಉಪಯೋಗ ಪಡೆದು 3.50 ಕೋಟಿ ರೂ ನೀಡಲಾಗಿದೆ. ಸಹ ವಿದ್ಯುತ್ ಸಂಬಂಧ ಹೊಸ ರೋಟರಿ ಅಳವಡಿಸಲು 4 ಕೋಟಿ ರೂ ನೀಡಲಾಗಿದೆ. ಇಲಾಖೆಯ ಪ್ರಮಾಣದಲ್ಲಿ 4 ಮತ್ತು 5ನೇ ವೇತನ ಆಯೋಗದ ಶಿಫಾರಸಿನಂತೆ ಕಾರ್ಮಿಕರಿಗೆ ಸುಮಾರು 4 ಕೋಟಿ ರೂ ನೀಡಲಾಗಿದೆ. 2025-26ನೇ ಹಂಗಾಮಿಗೆ 6.50 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ಮತ್ತು ಉಪಕರಣಗಳಿಗೆ ನೀಡಲಾಗಿದೆ ಎಂದು ವಿವರಿಸಿದರು. 2024-25ನೇ ಸಾಲಿನಲ್ಲಿ ರೈತರಿಗೆ ನೀಡಬೇಕಾದ ಸುಮಾರು 18 ಕೋಟಿ ರೂ. ಗಳನ್ನು ಸರ್ಕಾರದ ನೆರವಿಲ್ಲದೆ ನೀಡಲಾಗಿದೆ. ಮೈಷುಗರ್ ಕಾರ್ಖಾನೆಯ ಎಲ್ಲ ಉತ್ಪನ್ನಗಳನ್ನು (ಸಕ್ಕರೆ, ಮೊಲಾಸಿಸ್, ಪ್ರೆಸ್‌ಮಡ್, ಅಂಟು ಸಕ್ಕರೆ) ಟೆಂಡರ್ ಮೂಲಕ ಪಾರದರ್ಶಕವಾಗಿ ಮಾರಾಟ ಮಾಡಲಾಗಿದೆ. ರೈತರು, ಕಾರ್ಖಾನೆಯ ಹಿತೈಷಿಗಳು ಈ ಬಗ್ಗೆ ಆತಂಕಪಡದೆ ಯಾವುದೇ ಮಾಹಿತಿ ಬೇಕಾದರೂ ಕಂಪೆನಿಯಿಂದ ಯಾವುದೇ ಕ್ಷಣದಲ್ಲಾದರೂ ಪಡೆಯಬಹುದು ಎಂದು ಹೇಳಿದರು. ಮುಖಂಡರಾದ ಎಚ್.ಕೆ.ರುದ್ರಪ್ಪ, ಅಪ್ಪಾಜಿ, ಸುಂಡಹಳ್ಳಿ ಮಂಜುನಾಥ್, ಚಂದಗಾಲು ವಿಜಯ ಕುಮಾರ್, ಗೌರೀಶ್ ಹಾಜರಿದ್ದರು.
ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ಆಸ್ತಿಗಳನ್ನು ಕಾನೂನು ಪ್ರಕಾರ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮವಹಿಸಲಾಗಿದೆ. ಯಾವುದೇ ಕಾರಣಕ್ಕೂ ಅನ್ಯರ ಪಾಲಾಗಲು ಬಿಡುವುದಿಲ್ಲ. ಈಗಾಗಲೇ ಎಲ್ಲೆಲ್ಲಿ ಮೈಷುಗರ್ ಆಸ್ತಿಗಳು ಇದೆಯೋ ಅವೆಲ್ಲವನ್ನು ಗುರುತಿಸಿ ನಾಮಫಲಕ ಹಾಕಲಾಗಿದೆ. 2025-26ನೇ ಸಾಲಿನಲ್ಲಿ ಒಪ್ಪಂದದಂತೆ ಎಲ್ಲ ಕಬ್ಬನ್ನು ನುರಿಸಲಾಗುವುದು. ಅದೇ ರೀತಿ ಕನಿಷ್ಟ 7.5 ರಿಂದ 8ರಷ್ಟು ಇಳುವರಿ ಪಡೆಯಲು ಕ್ರಮವಹಿಸಲಾಗುವುದು. ಅಲ್ಲದೆ, ಈ ಬಾರಿ 4 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡುವ ಮೂಲಕ ಕಾರ್ಖಾನೆಗೆ ಲಾಭ ತರಲಾಗುವುದು. ಸಿ.ಡಿ.ಗಂಗಾಧರ ಮೈಷುಗರ್ ಅಧ್ಯಕ್ಷ