ಜಿಲ್ಲೆ

ಮೈಷುಗರ್ ಕಾರ್ಖಾನೆ ವಿಚಾರದಲ್ಲಿ ರಾಜ್ಯಸರ್ಕಾರದ ವಿಳಂಬ ಧೋರಣೆ: ಸುನಂದಾ ಜಯರಾಂ ಆಕ್ರೋಶ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯದೆ ರಾಜ್ಯ ಸರ್ಕಾರ ವಿಳಂಬಧೋರಣೆ ಅನುಸರಿಸುತ್ತಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಷುಗರ್ ಜೂನ್ ತಿಂಗಳ ಮೊದಲ ವಾರದಲೇ ಆರಂಭಗೊಳ್ಳಬೇಕಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಈಗಾಗಲೇ 5 ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಕಬ್ಬು ಅರೆಯಲು ಕಾರ್ಖಾನೆ ಸಿದ್ದವಿದೆ. ಯಶಸ್ವಿಯಾಗಿ ಕಬ್ಬನ್ನು ಅರೆಯಲು ಸರ್ಕಾರ 50 ಕೋಟಿ ರೂ ಕೊಟ್ಟಿದೆ. ಆದರೂ ಕಾರ್ಖಾನೆ ಪ್ರಾರಂಭವಾಗಲು ಒಂದು ತಿಂಗಳು ತಡವಾಗಿದೆ ಎಂದಿದ್ದಾರೆ.

ಪ್ರಗತಿಪರ ಹೋರಾಟಗಾರರು ಮತ್ತು ರೈತಸಂಘಟನೆಗಳು ಬಹುತೇಕ ಕಳೆದ 2 ವರ್ಷಗಳಿಂದ ಮೈಷುಗರ್ ಆರಂಭಕ್ಕೆ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಅದರ ಪ್ರಯತ್ನ ಫಲಿಸುವ ಸನ್ನಿವೇಶದಲ್ಲಿ ಸರ್ಕಾರ ಸ್ಪಂದಿಸಿದ್ದು, ಆಗಲೇ 1 ಲಕ್ಷ ಟನ್ ಕಬ್ಬನ್ನು ಅರೆದಿದೆ. ಎಲ್ಲವೂ ಕೂಡ ನಮ್ಮ ಕಣ್ಣಮುಂದೆ ಸತ್ಯವಾಗಿ ನಿಂತಿದೆ ಎಂದು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ತಾಂತ್ರಿಕ ಜ್ಞಾನವುಳ್ಳ ಎಂಡಿ ಅವರನ್ನು ಬದಲಾವಣೆ ಮಾಡಿ ಐಎಎಸ್ ಅಧಿಕಾರಿ ರವಿಕುಮಾರ್ ಅವರನ್ನು ಸರ್ಕಾರ ನೇಮಿಸಿದೆ. ಕಳೆದ ಒಂದು ವಾರದಿಂದ ಯಾವುದೇ ಅಧಿಕಾರಿಗಳು ಕಾರ್ಖಾನೆಯತ್ತ ಸುಳಿದಿಲ್ಲ, ಆಡಳಿತಾಧಿಕಾರಿನೂ ಇಲ್ಲ, ತಾಂತ್ರಿಕ ಜ್ಞಾನ ಉಳ್ಳವರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ರೈತರದ್ದೇನು ತಪ್ಪಿದೆ. ಪರಿಣಾಮ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಆಗುತ್ತಿದೆ. 2-3 ಖಾಸಗಿ ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿಯ ಕಬ್ಬನ್ನು ತೆಗೆದುಕೊಳ್ಳುತ್ತಿವೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಮೈಷುಗರ್ ವ್ಯಾಪ್ತಿಯ ಕಬ್ಬು ಬೇರೆ ಕಾರ್ಖಾನೆಗೆ ಹೋಗಬಾರದು. ನಮ್ಮ ಕಾರ್ಖಾನೆಯೇ ಕಬ್ಬನ್ನು ಅರೆಯಬೇಕೆಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ಕೂಡಲೇ ಇದಕ್ಕೆ ಗಮನ ಕೊಟ್ಟು ಹಣ ಕೊಟ್ಟಿದ್ದರ ಜತೆಗೆ ಸಕಾಲದಲ್ಲಿ ಕಾರ್ಖಾನೆಯಲ್ಲಿಯೇ ಕಬ್ಬು ಅರೆಯಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈಗ ಕಬ್ಬನ್ನು ಕಡಿಯಲಿಕ್ಕೆ ಗ್ಯಾಂಗ್‌ಮನ್‌ಗಳು ಬಂದಿದ್ದಾರೆ. ಈಗಾಗಲೇ ಮಾತುಕತೆಯಾಗಿ ಒಪ್ಪಂದವಾಗಿತ್ತು. ಅವರಿಗಾದರೂ ಮುಂಗಡ ಹಣ ಕೊಡಬಹುದಿತ್ತು. 50 ಕೋಟಿ ರೂಗಳಲ್ಲಿ ಒಂದು ರೂವನ್ನೂ ಖರ್ಚು ಮಾಡಿಲ್ಲವೆಂದು ಹೇಳುತ್ತಾರೆ. ಗ್ಯಾಂಗ್‌ಮನ್‌ಗಳಿಗೆ ಮುಂಗಡ ಹಣಕೊಟ್ಟಿಲ್ಲವೆಂದು ಹೇಳುತ್ತಾರೆ. ಹೀಗಿರುವಾಗ ಜುಲೈ ಮೊದಲ ವಾರದಲ್ಲಿ ಕಬ್ಬು ಅರೆಯಲಿಕ್ಕೆ ಸಾಧ್ಯವೇ?. ಯಾರದೂ ತಪ್ಪಿಲ್ಲ ತಪ್ಪಿಲ್ಲ ಎನ್ನುವುದಾದರೆ ಮೈಶುಗರ್‌ನಲ್ಲಿ ಕಬ್ಬು ಅರೆಯುವುದು ಏಕೆ ಪ್ರಾರಂಭ ಆಗಿಲ್ಲ. ಎಲ್ಲವೂ ಸಮರ್ಪಕವಾಗಿದ್ದರೂ ಯಾಕೆ ಸಾಧ್ಯವಾಗಿಲ್ಲ. ಇದು ಯಾರ ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.