ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆಂದು 50 ಕೋಟಿ ರೂ ಬಿಡುಗಡೆ ಮಾಡಿದೆ. ಆದರೆ ನಿಗದಿತ ಸಮಯಕ್ಕೆ ಕಬ್ಬು ಅರೆಯುವಿಕೆ ಪ್ರಾರಂಭಿಸದ ಪರಿಣಾಮ ಮೈಷುಗರ್ ವ್ಯಾಪ್ತಿಯ ಬೆಳೆ ಅನ್ಯ ಕಾರ್ಖಾನೆ ಪಾಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಲ್ಲಿ ನುರಿಸಲು ಕಬ್ಬು ಇಲ್ಲದಂತಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವ ವಿಚಾರದಲ್ಲಿ ಗೊಂದಲ ಮುಂದುವರೆಯುತ್ತಲೇ ಇದೆ. ಜೂನ್‌ನಲ್ಲಿ ಕಬ್ಬು ಅರೆಯುವುದಾಗಿ ೋಷಣೆ ಮಾಡಿತ್ತು. ಇದಾದ ಬಳಿಕ ಜೂ.16ರಂದು ಬಾಯ್ಲರ್‌ಗೆ ಬೆಂಕಿ ಹಾಕಲಾಗಿತ್ತು. ಅಂತೆಯೇ ತಿಂಗಳಾಂತ್ಯಕ್ಕೆ ಪ್ರಾರಂಭಿಸುವುದಾಗಿ ಹೇಳಿದ ಮತ್ತೆ ಜುಲೈ ಮೊದಲ ವಾರಕ್ಕೆ ಮುಂದೂಡಲಾಯಿತು. ಆದರೂ ಅದ್ಯಾಕೋ ಕಬ್ಬು ಅರೆಯುವ ಬಗ್ಗೆ ಮುನ್ಸೂಚನೆ ಸಿಗದ ಹಿನ್ನೆಲೆಯಲ್ಲಿ ರೈತರು ಅನ್ಯ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ.
ಇನ್ನು ವಾಸ್ತವವಾಗಿ ಗಮನಿಸಿದರೆ ರೈತರೇ ಸ್ವಯಂ ಪ್ರೇರಿತರಾಗಿ ಇತರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೆಂದರೆ ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದೆ. ಪರಿಣಾಮ ಲಕ್ಷಾಂತರ ಟನ್ ಕಬ್ಬು ಜಮೀನಿನಲ್ಲಿಯೇ ಒಣಗುತ್ತಿದೆ. ಮಾತ್ರವಲ್ಲದೆ ಇಳುವರಿಯೂ ಕಡಿಮೆಯಾಗಿದೆ. ಇತ್ತ ಮೈಷುಗರ್ ಪ್ರಾರಂಭದ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಷ್ಟದ ಭಯದಲ್ಲಿ ವಿಧಿಯಿಲ್ಲದೇ ಕಬ್ಬು ಕೊಡುತ್ತಿದ್ದಾರೆ. ಇದಕ್ಕೆ ಇತರೆ ಕಾರ್ಖಾನೆಗಳು ಕೂಡ ಸ್ಪಂದಿಸುತ್ತಿವೆ. ಅಂತೆಯೇ ಅದಕ್ಕೆ ಪೂರಕವಾಗಿ ಕೂಲಿಯಾಳುಗಳನ್ನು ಕಳುಹಿಸಿ ಕಬ್ಬು ಕಟಾವು ಮಾಡಿಸುತ್ತಿದ್ದಾರೆ.
ಮಾತ್ರವಲ್ಲದೆ ಇನ್ನಷ್ಟು ಗೊಂದಲ ರೈತರಲ್ಲಿ ಆತಂಕ ಸೃಷ್ಟಿಸಿದೆ. ಕಾರ್ಖಾನೆಗೆ ವಿದ್ಯುತ್ ಪೂರೈಕೆ ಸಂಬಂಧ ಕೋಟ್ಯಂತರ ರೂ ಬಾಕಿ ಉಳಿಸಿಕೊಂಡಿದೆ. ಮುಂದಿನ ದಿನದಲ್ಲಿ ಮತ್ತೆನಾದರೂ ಸಮಸ್ಯೆಯಾಗಿ ವಿದ್ಯುತ್ ಕೈಕೊಟ್ಟರೆ ಸಮಸ್ಯೆಯಾಗಲಿದೆ. ಈ ನಡುವೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ದಿಢೀರ್ ಬದಲಿಸಿ ಜೂ.27ರಂದು ಐಎಎಸ್ ಅಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನು ನಿಯೋಜಿಸಲಾಗಿದೆ. ಆದರೆ ನೂತನ ಎಂಡಿ ಕಾರ್ಖಾನೆಗೆ ಬಂದ ಮಾಹಿತಿ ಇಲ್ಲ. ಈ ಎಲ್ಲದರ ಪರಿಣಾಮ ರೈತರು ಅನ್ಯಕಾರ್ಖಾನೆಗೆ ಕಬ್ಬು ನೀಡುವ ಮನಸ್ಸು ಮಾಡಿದ್ದಾರೆ. ಇನ್ನು ಮೈಷುಗರ್ ವ್ಯಾಪ್ತಿಯ ಕಬ್ಬನ್ನು ತೆಗೆದುಕೊಳ್ಳಬಾರದೆಂದು ಅನ್ಯ ಕಾರ್ಖಾನೆಗಳಿಗೆ ಜಿಲ್ಲಾಡಳಿತ ಸೂಚನೆ ಕೊಟ್ಟರೂ ಪ್ರಯೋಜನಕ್ಕೆ ಬರುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಬೇಕಿದೆ.