ಮಂಡ್ಯ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ 50 ಕೋಟಿ ರೂ ಅನುದಾನಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವಿಕೆ ಅಗತ್ಯವಿರುವ ಸಿದ್ಧತೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯಲ್ಲಿ ಈ ಹಂಗಾಮಿನ ಕಬ್ಬು ನುರಿಸುವಿಕೆಯನ್ನು ಪ್ರಾರಂಭಿಸಲು ಹಾಗೂ ದುಡಿಯುವ ಬಂಡವಾಳಕ್ಕೆ ಸರ್ಕಾರದಿಂದ 50 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕೆಂದು ನಾನು ಹಾಗೂ ಶಾಸಕ ರವಿಕುಮಾರ್ ಗಣಿಗ ಅವರು ಮಾಡಿದ್ದ ಮನವಿಗೆ ಸ್ಪಂದಿಸಿ ಸಿಎಂ ತಕ್ಷಣವೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಗ್ಯಾಂಗ್‌ಗಳಿಗೆ ನೀಡಲು ಹಣದ ಅವಶ್ಯಕತೆ ಇದೆ. ಯಂತ್ರಗಳ ದುರಸ್ತಿಗಳೂ ಇವೆ. ಅದಕ್ಕಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಹೀಗಾಗಿ ಕಾರ್ಖಾನೆ ಪ್ರಾರಂಭೋತ್ಸವ ಹಾಗೂ ಗ್ಯಾಂಗ್‌ಗಳಿಗೆ ನೀಡಲು 15 ಕೋಟಿ ರೂ ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳ(ವರ್ಕಿಂಗ್ ಕ್ಯಾಪಿಟಲ್) ಗಾಗಿ 35 ಕೋಟಿ ರೂ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಸರ್ಕಾರದ ಈ ಸಹಾಯದಿಂದ ಅವಧಿಗೆ ಸರಿಯಾಗಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭಿಸಲು ಅನುಕೂಲವಾಗಲಿದೆ. ರೈತರಿಗೆ ಸಕಾಲದಲ್ಲಿ ಕಬ್ಬು ಕಟಾವು ಹಾಗೂ ಹಣ ಬಿಡುಗಡೆಗೂ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಮನವಿ ಮಾಡಿದ್ದ ಶಾಸಕದ್ವಯರು: ಮೈಷುಗರ್ ಕಾರ್ಖಾನೆ ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆಯನ್ನು ಸ್ಥಗಿತ ಮಾಡಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಪುನಃ ಪ್ರಾರಂಭಿಸಲಾಗಿತ್ತು. ಅಲ್ಲದೆ, ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ 50 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರೂ ಇದುವರೆಗೆ 32 ಕೋಟಿ ರೂ ಮಾತ್ರವೇ ಬಿಡುಗಡೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ವಿವರಿಸಿದ್ದರು.
ಕಾರ್ಖಾನೆಯ ವ್ಯಾಪ್ತಿಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 10,002 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್ ಟನ್ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ನುರಿಸಲು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಅಂದರೆ ಜೂನ್‌ನಿಂದಲೇ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ, ಕಟಾವು ಗ್ಯಾಂಗ್‌ಗಳಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂ ಅಗತ್ಯವಿದೆ ಎಂದು ಮನವಿಯಲ್ಲಿ ಹೇಳಿದ್ದರು.