ಮಂಡ್ಯ: ವೇತನ, ನೇಮಕಾತಿ ಆದೇಶ, ಇಎಸ್‌ಐ, ಪಿಎಫ್ ಸೌಲಭ್ಯ ಸೇರಿದಂತೆ ಕಾರ್ಮಿಕರ ಸೌಲಭ್ಯ ನೀಡದೆ ಏಜೆನ್ಸಿ ವಂಚಿಸುತ್ತಿದೆ ಎಂದು ಆರೋಪಿಸಿ ಮೈಷುಗರ್ ಗುತ್ತಿಗೆ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಎದುರು ಜಮಾವಣೆಗೊಂಡ ಕಾರ್ಮಿಕರು, ಏಜೆನ್ಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಡಿಸೆಂಬರ್‌ನಿಂದಲೂ ನಮ್ಮ ಕಾರ್ಮಿಕರಿಗೆ ವೇತನ ನೀಡಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಮೈಷುಗರ್ ಕಾರ್ಖಾನೆಯಿಂದಲೇ ಹೊರಹೋಗುವಂತೆ ಧಮ್ಕಿ ಹಾಕುತ್ತಾರೆ. ಇದರ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನಮ್ಮ ಕಾರ್ಮಿಕರು 12 ಗಂಟೆ ಕೆಲಸ ಮಾಡಿದ್ದಾರೆ. ಆ ಕೆಲಸಕ್ಕಾಗಿ ನ್ಯಾಯಯುತ ವೇತನ ನೀಡಿದರು ಕೊಡದೇ ಏಜೆನ್ಸಿ ವಂಚಿಸಿದೆ. ಯಾವುದೇ ರಜೆಯನ್ನು ತೆಗೆದುಕೊಳ್ಳಬೇಕೆಂದರೂ ಒಂದು ವಾರ ಮುಂಚಿತವಾಗಿಯೇ ರಜೆ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವೇತನ ಕೇಳಬಾರದೆಂದು ಭಯಹುಟ್ಟಿಸಿ ಕಾರ್ಮಿಕರಿಂದ ಅರ್ಜಿ ಬರೆಸಿಕೊಂಡು ಸಹಿ ಹಾಕಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಇರುವ ಸೌಲಭ್ಯವನ್ನು ನೀಡದೇ ದುಡಿಸಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡುತ್ತಾರೆ. ಈಗಿರುವ ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚು ಸಂಬಳ ನೀಡಿ ನಮ್ಮ ಸ್ಥಳೀಯ ನೌಕರರಿಗೆ ಕಡಿಮೆ ನೀಡುತ್ತಾರೆ. ಈ ಅನ್ಯಾಯವನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆ ಕಾರ್ಮಿಕರಾದ ದೇವರಾಜು, ಕೆಂಪಣ್ಣ, ಆನಂದ, ಪ್ರಕಾಶ್, ಮಹೇಶ್, ಸಿದ್ದರಾಜು, ಕವನ್‌ಗೌಡ, ಮಂಜುನಾಥ್, ಸುನೀಲ್ ಇತರರಿದ್ದರು.