ಜಿಲ್ಲೆ

ಮೈಸೂರಿನ ಉದ್ಬೂರು ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತೆ ಗರಿ

ಮೈಸೂರು: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ (ಎನ್‌ಕ್ಯೂಎಎಸ್) ಮೌಲ್ಯಮಾಪನದಲ್ಲಿ ತಾಲೂಕಿನ ಉದ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ (ಆಯುಷ್ಮಾನ್ ಆರೋಗ್ಯ ಕೇಂದ್ರ) ತೇರ್ಗಡೆಯಾಗುವ ಮೂಲಕ ಮಹತ್ವದ ಸಾಧನೆ ಮಾಡಿದೆ.

ಸರ್ಕಾರ ನಿಗದಿಪಡಿಸಿದ ಎನ್‌ಕ್ಯೂಎಎಸ್ ಮಾನದಂಡದಡಿ ಗುಣಮಟ್ಟದ ಚಿಕಿತ್ಸೆ ನೀಡುವ, ರಾಷ್ಟ್ರೀಯ ಮಾನ್ಯತೆ ಪಡೆದ ಆಯುಷ್ಮಾನ್ ಆರೋಗ್ಯ ಕೇಂದ್ರವಾಗಿ ಇದು ಹೊರಹೊಮ್ಮಿದೆ.

ಆರೋಗ್ಯ ಇಲಾಖೆ 2020-2030ರ ದಶಕವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಗಳ ದಶಕವೆಂದು ಘೋಷಿಸಿದೆ. ಆರೋಗ್ಯ ಸೇವೆಯಲ್ಲಿ ಚಿಕಿತ್ಸೆ ವಿಳಂಬ ಹಾಗೂ ಔಷಧ ಸೇವನೆ ಕುರಿತು ಸಮಾಲೋಚನೆಯ ಕೊರತೆ ಇತ್ತು. ಈ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಆರೋಗ್ಯದಲ್ಲಿ ಶೇ.50 ಕ್ಕಿಂತಲೂ ಹೆಚ್ಚಿನ ಅನಾರೋಗ್ಯವಿದೆ ಎಂದು ವರದಿಯಾಗಿದ್ದು, ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವುದು ಇಲಾಖೆಯ ಮೂಲ ಉದ್ದೇಶವಾಗಿದೆ.

ಸಾರ್ವಜನಿಕವಾಗಿ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ರೋಗಗಳನ್ನು ಗುಣಪಡಿಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕಿನ ಉದ್ಬೂರು ಆಯುಷ್ಮಾನ್ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡದಡಿ ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿರುವು ದರಿಂದ 2024-25ನೇ ಸಾಲಿನ ರಾಷ್ಟ್ರೀಯ ಮಾನ್ಯತೆ ಪಡೆದ ಜಿಲ್ಲೆಯ ಅತ್ಯುತ್ತಮ ಆಯುಷ್ಮಾನ್ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

ಈ ಸಾಧನೆ ಸಮುದಾಯಕ್ಕೆ ಸುಲಭವಾಗಿ ಲಭ್ಯವಾಗುವ, ರೋಗಿ-ಕೇಂದ್ರೀಕೃತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಬೆಂಬಲ ಸಿಬ್ಬಂದಿಯ ನಿರಂತರ ಶ್ರಮಕ್ಕೆ ಸಾಕ್ಷಿಯಾಗಿದೆ.

ಎನ್‌ಕ್ಯೂಎಎಸ್ ಅನುಷ್ಠಾನಗೊಂಡಿರುವುದರಿಂದ, ರೋಗಿಗಳಿಗೆ ಉಚಿತವಾಗಿ ಪರೀಕ್ಷೆ, ಔಷಧ ಹಾಗೂ ಚಿಕಿತ್ಸಾ ಸೇವೆಗಳು ಲಭ್ಯವಾಗುತ್ತವೆ. ಆ ಮೂಲಕ ಖಾಸಗಿ ಆಸ್ಪತ್ರೆಗೆ ತೆರಳಬೇಕಾದ ಅವಶ್ಯಕತೆ ಕಡಿಮೆಯಾಗುವುದರ ಜತೆಗೆ ರೋಗಿಗಳ ಖಾಸಗಿ ವೆಚ್ಚವೂ ಇಳಿಕೆಯಾಗುತ್ತದೆ. ಇದರಿಂದ ಗ್ರಾಮೀಣ ಜನತೆಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಗೌರವಪೂರ್ಣ ಆರೋಗ್ಯ ಸೇವೆ ಖಚಿತವಾಗುತ್ತದೆ. ಶುದ್ಧತೆ, ಮೂಲಸೌಕರ್ಯ ಹಾಗೂ ನಿರಂತರ ಮೌಲ್ಯಮಾಪನದ ಮೂಲಕ ಸೇವಾ ಗುಣಮಟ್ಟವನ್ನು ಕಾಪಾಡಲಾಗುತ್ತಿದ್ದು, ಗ್ರಾಮ ಮಟ್ಟದಲ್ಲೇ ಜನತೆಗೆ ಸಮಾನ ಹಾಗೂ ಸುಧಾರಿತ ಆರೋಗ್ಯ ಸೇವೆ ದೊರೆಯುತ್ತಿದೆ.

ಎನ್‌ಕ್ಯೂಎಎಸ್ ಪ್ರಮಾಣೀಕರಣವು ಸೇವಾ ವಿತರಣೆ, ರೋಗಿ ಸುರಕ್ಷತೆ, ಸೋಂಕು ನಿಯಂತ್ರಣ, ಮೂಲಸೌಕರ್ಯ ಮತ್ತು ಸಮುದಾಯ ತೃಪ್ತಿ ಮೊದಲಾದ ಅಂಶಗಳ ಆಧಾರದ ಮೇಲೆ ಕಠಿಣ ಮೌಲ್ಯಮಾಪನದ ನಂತರ ನೀಡಲಾಗುತ್ತದೆ. ಈ ತೇರ್ಗಡೆ, ಆರೋಗ್ಯ ಕೇಂದ್ರವು ಉನ್ನತ ಮಟ್ಟದ ಗುಣಮಟ್ಟವನ್ನು ಸಾಧಿಸಲು ಬದ್ಧವಾಗಿರುವುದಕ್ಕೆ ಸಾಕ್ಷಿಯಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾದ ರಾಷ್ಟ್ರೀಯ ಗುಣಮಟ್ಟ ಭರವಸೆಯ ಜಿಲ್ಲಾ ಸಲಹೆಗಾರ ಡಾ.ಗೋಪಿನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ಉದ್ಬೂರು ಆಯುಷ್ಮಾನ್ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಆರ್.ಉಷಾ ಮತ್ತು ತಂಡವನ್ನು ಶ್ಲಾಘಿಸಲಾಯಿತು.

ಉದ್ಬೂರು ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಎರಡು ವರ್ಷಗಳಲ್ಲೇ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ ಮೌಲ್ಯಮಾಪನದಲ್ಲಿ ತೇರ್ಗಡೆಯಾಗಿರುವುದು ಸಂತಸ ತಂದಿದೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲು ಉತ್ತೇಜನ ನೀಡಿದೆ. ಇದಕ್ಕೆ ಕಾರಣಕರ್ತರಾದ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ಇಡೀ ತಂಡ, ಮೇಲಿನ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

ಡಾ. ಆರ್.ಉಷಾ ವೈದ್ಯಾಧಿಕಾರಿ, ಉದ್ಬೂರು ಆಯುಷ್ಮಾನ್ ಆರೋಗ್ಯ ಕೇಂದ್ರ