ಜಿಲ್ಲೆ

ಮೈಸೂರು ದಸರೆಯಲ್ಲಿ ಪಸರಿಸಿದ ನವೋಲ್ಲಾಸ

ಮಂಜುನಾಥ ತಿಮ್ಮಯ್ಯ

ಮೈಸೂರು: ವಿಶ್ವ ಪ್ರಸಿದ್ಧ ದಸರಾ ಮಹೋತ್ಸವದಲ್ಲಿ ನವೋಲ್ಲಾಸ ಎಲ್ಲೆಡೆ ಪಸರಿಸಿದ್ದು, ನಾಡಹಬ್ಬ ಕಳೆಗಟ್ಟಿದೆ.


ತರೇಹವಾರಿ ಕಾರ್ಯಕ್ರಮಗಳು ನವರಾತ್ರಿ ಸಡಗರಕ್ಕೆ ರಂಗು ತುಂಬಿದವು. 6ನೇ ದಿನವಾದ ಮಂಗಳವಾರ ಸಹ ಮೈಸೂರು ದಸರಾ ಸಂಭ್ರಮದಲ್ಲಿ ಮಿಂದೆದ್ದಿತು. ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಹೌಸ್ ಫುಲ್ ಆಗಿತ್ತು.


ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಸಮಷ್ಠಿ ಕವಿಗೋಷ್ಠಿಯ ವಿಶೇಷ ಎನಿಸಿತು. ಹೊರರಾಜ್ಯ, ಹೊರದೇಶಗಳ ಭಾವ-ಭಾಷೆಗಳ ಸಮ್ಮಿಲನಕ್ಕೆ ಇದು ವೇದಿಕೆಯಾಯಿತು. ಇದು ದಸರಾ ಕವಿಗೋಷ್ಠಿಗೆ ಹೊಸ ಭಾಷ್ಯ ಬರೆಯುವ ಕಾವ್ಯಗಳ ಅನಾವರಣವಾಯಿತು. ಮೂಲಭಾಷೆ, ಉದ್ದಿಷ್ಟ ಭಾಷೆಯಲ್ಲಿ ಪದ್ಯ ರಸಾಯನಕ್ಕೂ ಕಾರಣವಾಯಿತು. ಕನ್ನಡದೊಂದಿಗೆ ತುಳು, ಮರಾಠಿ, ಸಿಂಧಿ, ತಮಿಳು, ಮಣಿಪುರಿ, ಡೋಗ್ರಿ, ಅರೆಭಾಷೆ, ಒಡಿಯಾ, ಹಿಬ್ರೂ, ಕೊಡವ, ತೆಲುಗು, ಹಿಂದಿ, ಇಂಗ್ಲಿಷ್, ಅರೇಬಿಕ್, ಮಲೆಯಾಳಂ, ಬ್ಯಾರಿ ಹೀಗೆ ವಿವಿಧ ಭಾಷೆಗಳ ಕವಿತೆಗಳು ಕಂಪು ಬೀರಿದವು. ಸಾಹಿತಿ ಡಾ.ಎಚ್.ಎಸ್ ಶಿವಪ್ರಕಾಶ್, ಜ.ನಾ. ತೇಜಶ್ರೀ ಇನ್ನಿತರರು ಈ ವಿಶಿಷ್ಟ ಗೋಷ್ಠಿಗೆ ಸಾಕ್ಷಿಯಾದರು.


ಮಹಿಳಾ ದಸರಾ ವೈವಿಧ್ಯತೆಯನ್ನು ಬಿಂಬಿಸಿತು. ಮ್ಯಾಜಿಕ್ ಕಲಾವಿದ ಶ್ರೀನಿವಾಸ್ ಅವರಿಂದ ಮ್ಯಾಜಿಕ್ ಶೋ ಮಾಂತ್ರಿಕ ಲೋಕ ಸೃಷ್ಟಿಸಿದ್ದರೆ, ಚಿಣ್ಣರ ವೇಷಭೂಷಣ ಸ್ಪರ್ಧೆ ಅನೇಕ ಮಹನೀಯರ ಸ್ಮರಣೆಗೆ ವೇದಿಕೆಯಾಯಿತು. ಗಿನ್ನೆಸ್ ದಾಖಲೆ ಪುರಸ್ಕೃತೆ ಡಾ.ರಾಧಾ ಮಲ್ಲಪ್ಪ ಅವರೊಂದಿಗೆ ಸಂವಾದ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಸಂವಾದ ಸಭಿಕರ ಚಿಂತನೆಗೆ ಹಚ್ಚಿತು.


ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದ ವನಿತೆಯರು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಿದರೆ, ಆಟೋಟ ಸ್ಪರ್ಧೆಗಳಲ್ಲೂ ಮಿಂಚಿದರು. ಆರ್.ಆದ್ಯ ಲಕ್ಷ್ಮೀ ಅವರಿಂದ ಕೂಚುಪುಡಿ ನಾಟ್ಯ, ಜಾನಪದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ತೃತೀಯ ಲಿಂಗಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಯೊಂದಿಗೆ ಮಹಿಳಾ ದಸರಾ ಸಂಪನ್ನಗೊಂಡಿತು.


ಅರಮನೆ ವೇದಿಕೆಯಲ್ಲಿ ಇಳಿಸಂಜೆಯ ತಂಗಾಳಿಯ ಅಲೆಯಲ್ಲಿ ಪೊಲೀಸ್ ಸಮೂಹ ಮೇಳದಿಂದ ಹೊರಚಿಮ್ಮಿದ ಸಂಗೀತದ ನಿನಾದಕ್ಕೆ ಶ್ರೋತೃ ಸಮೂಹ ತಲೆದೂಗಿತು. ಪೊಲೀಸ್ ಬ್ಯಾಂಡ್‌ನ ರಾಗಲಹರಿ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು. ನೂರಾರು ಪೊಲೀಸರು ಏಕಕಾಲದಲ್ಲಿ ಅದ್ಭುತವಾಗಿ ವಾದ್ಯ ನುಡಿಸಿ ಭೇಷ್ ಎನಿಸಿಕೊಂಡರು. ಜತೆಗೆ, ಸೋಸಲೆ ಗಂಗಾಧರ್ ಮತ್ತು ತಂಡದಿಂದ ನಾಲ್ವಡಿ ಕಾವ್ಯ ಕುಂಚ ಗಾಯನ, ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದಿಂದ ಜಾನಪದ ಗಾಯನ ನೆರೆದವರನ್ನು ರಂಜಿಸಿತು. ವಿದ್ವಾನ್ ಶಿವಶಂಕರ್‌ಸ್ವಾಮಿ ಮತ್ತು ತಂಡದಿಂದ ವಾದ್ಯ ಸಂಗೀತ-ರಿದಮ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನಡೆಯಿತು.


ಜಗನ್ಮೋಹನ, ಪುರಭವನ, ಚಿಕ್ಕಗಡಿಯಾರ, ನಾದಬ್ರಹ್ಮಸಂಗೀತ ಸಭಾ, ಗಾನಭಾರತಿ ಹೀಗೆ 13 ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಭಿಕರನ್ನು ಮನರಂಜಿಸಿದವು.


ಯುವ ದಸರಾ ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸಿತು. ರಿಂಗ್‌ರೋಡ್ ಬಳಿ ಉತ್ತನಹಳ್ಳಿಯ ಬಯಲು ಮೈದಾನದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕ, ರ‌್ಯಾಪರ್ ಬಾದ್ ಷಾ ಅವರು ಸಂಗೀತದ ಧೂಳೆಬ್ಬಿಸಿದರು. ರ‌್ಯಾಪ್ ಹಾಡುಗಳಿಗೆ ಜನರು ಹೆಜ್ಜೆ ಹಾಕಿದರು. ಗಾಯಕ ಸಂಗೀತ ರವೀಂದ್ರನಾಥನ್ ಮತ್ತು ಜಸ್ ಕರಣ್ ಅವರ ಗೀತಗಾಯನಕ್ಕೆ ಸಂಗೀತರಸಿಕರು ಮನಸೋತರು.


ವಿದ್ಯುತ್ ದೀಪಾಲಂಕಾರ ದಸರೆಗೆ ರಂಗು ತುಂಬಿದೆ. 130 ಕಿ.ಮೀ. ಬೆಳಕಿನ ದಿಬ್ಬಣ ವೀಕ್ಷಣೆಗೆ ಜನಸಮೂಹ ಮುಗಿಬಿದ್ದಿದ್ದರು. ಇದರಿಂದ ನಗರದ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ಪ್ರವಾಸಿಗರಿಗೆ, ಜನರಿಗೆ ಕಿರಿಕಿರಿಯಾಯಿತು.


ಜಂಬೂಸವಾರಿಗೆ ಇನ್ನೂ 4 ದಿನ ಮಾತ್ರ ಉಳಿದಿದ್ದು, ದಸರೆ ಬಹುತೇಕ ಕಾರ್ಯಕ್ರಮಗಳು ಮುಕ್ತಾಯ ಹಂತಕ್ಕೆ ಬಂದಿವೆ. ವಿಜಯದಶಮಿ ಮೆರವಣಿಗೆಗೆ ಮೈಸೂರು ಸಜ್ಜಾಗುತ್ತಿದೆ.