ಮೈಸೂರು: ಜರ್ಮನಿಯಿಂದ ಕಳೆದ ವರ್ಷ ಮೈಸೂರು ಮೃಗಾಲಯಕ್ಕೆ ಆಗಮಿಸಿದ ತಬೋ ಹೆಸರಿನ ಗಂಡು ಗೊರಿಲ್ಲಾದ ಹುಟ್ಟುಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ತಬೋ 14 ವಸಂತಗಳನ್ನು ಪೂರೈಸಿ ಬುಧವಾರ 15ನೇ ವಸಂತಕ್ಕೆ ಕಾಲಿರಿಸಿದ್ದಾನೆ. ಹುಟ್ಟುಹಬ್ಬದ ಪ್ರಯುಕ್ತ ತಬೋಗೆ ಇಷ್ಟದ ಹಣ್ಣುಹಂಪಲುಗಳನ್ನು ನೀಡಲಾಯಿತು. ಮೃಗಾಲಯ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ತಬೋಗೆ ದೂರದಿಂದಲೇ ಶುಭ ಕೋರಿದರು.
ಪ್ರಾಣಿ ವಿನಿಮಯ ಯೋಜನೆಯಡಿ ಕಳೆದ ವರ್ಷ ಜರ್ಮನಿ ಮೃಗಾಲಯದಿಂದ ಎರಡು ಗೊರಿಲ್ಲಾಗಳನ್ನು ತರಲಾಗಿತ್ತು. ಜರ್ಮನಿ ಮೃಗಾಲಯದಲ್ಲೂ ಪ್ರತಿ ವರ್ಷ ತಬೋ ಹುಟ್ಟುಹಬ್ಬವನ್ನು ಆಚರಿಸಲಾಗುತಿತ್ತು. ಅದೇ ರೀತಿ ಮೈಸೂರು ಮೃಗಾಲಯದಲ್ಲೂ ಜನ್ಮ ದಿನ ಆಚರಿಸಲಾಯಿತು.
ಗೊರಿಲ್ಲಾದ ಮನೆ ಆವರಣದಲ್ಲಿ ‘ಹ್ಯಾಪಿ ಬರ್ತ್‌ಡೇ ತಬೋ’ ಎಂದು ಹಣ್ಣು ಹಂಪಲಿನಿಂದ ಬರೆಯಲಾಗಿತ್ತು. ಫೈನಾಪಲ್, ಪರಂಗಿ ಹಣ್ಣು, ಸೇಬು, ಕಿತ್ತಳೆ, ಕರ್ಬೂಜಾ, ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಕರ್ಜೂರ, ಬಾದಾಮಿ, ಗೋಡಂಬಿ ಸೇರಿದಂತೆ ವಿವಿಧ ಹಣ್ಣುಗಳನ್ನು ಹುಟ್ಟುಹಬ್ಬದ ಪ್ರಯುಕ್ತ ನೀಡಲಾಯಿತು.
ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆಯನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ತಬೋ ಗೂಡಿನಿಂದ ಹೊರ ಬಂದು ಹಣ್ಣು ಹಂಪಲು ಸೇವಿಸುತ್ತಿದ್ದಂತೆಯೇ ಪ್ರವಾಸಿಗರು ‘ಹ್ಯಾಪಿ ಬರ್ತ್ ಡೇ ತಬೋ’ ಎಂದು ಕೂಗಿ ಶುಭ ಕೋರಿದರು.