ಜಿಲ್ಲೆ

ಮೈಸೂರು: ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

ಮೈಸೂರು: ಗೃಹಿಣಿಯನ್ನು ಹತ್ಯೆ ಮಾಡಿದ ಅಪರಾಧಿಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ನಿವಾಸಿ ದೇವಿರಮ್ಮ ಅವರನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ವೆಂಕಟೇಶ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ದೇವಿರಮ್ಮ ಅವರನ್ನು 25 ವರ್ಷಗಳ ಹಿಂದೆ ವಿವಾಹವಾಗಿದ್ದ. ಇವರಿಗೆ ಒಬ್ಬ ಪುತ್ರ ಇದ್ದಾನೆ.

ಈತ ಪತ್ನಿಯ ಶೀಲ ಶಂಕಿಸಿ ಆಗಿಂದಾಗೆ ಗಲಾಟೆ ಮಾಡುತ್ತಿದ್ದ. ಅಲ್ಲದೆ, ಹಣಕೋಸ್ಕರ ಪತ್ನಿಯನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ದೇವಿರಮ್ಮ ಮಗನೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಲು ಪ್ರಾರಂಭಿಸಿದರು. ಈ ಸಂದರ್ಭ ಮತ್ತೆ ವೆಂಕಟೇಶ ಹೆಂಡತಿ, ಮಗನೊಂದಿಗೆ ವಾಸ ಮಾಡಲು ಪ್ರಾರಂಭಿಸಿದ. ಆ ನಂತರವೂ ಆತನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಮತ್ತೆ ಆಕೆಯ ಬಳಿ ಹಣಕೋಸ್ಕರ ಜಗಳ ತೆಗೆದು ಆಕೆಗೆ ಕುತ್ತಿಗೆಗೆ ಸೀರೆ ಬಿಗಿದು 6-5-2022ರಂದು ಹತ್ಯೆ ಮಾಡಿದ.

5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಪ್ರಕರಣದ ವಿಚಾರಣೆ ನಡೆಸಿ

ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯೋಗೇಶ್ವರ ವಾದ ಮಂಡಿಸಿದರು.