ಜಿಲ್ಲೆ

ಕುಡಿಯುವ ನೀರಿಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಕುಡಿಯುವ ನೀರು ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.


ಮಾನಸ ಗಂಗೋತ್ರಿಯಲ್ಲಿರುವ ಅಧ್ಯಯನ ಸಂಸ್ಥೆ ಎದುರು ಜಮಾವಣೆಗೊಂಡ ವಿದ್ಯಾರ್ಥಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಕುರಿತು ವಿಭಾಗದ ಅಧೀಕ್ಷಕರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.


ಮೂಲಸೌಕರ್ಯಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ. ಆದರೆ, ಶತಮಾನೋತ್ಸವ ಕಂಡಿರುವ ಮೈವಿವಿಯು ಮೂಲಸೌಕರ್ಯ ಕಲ್ಪಿಸುವಲ್ಲಿ ಮತ್ತು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿ ಎಂ.ಲಿಂಗರಾಜು ಆರೋಪಿಸಿದರು.


ಮೈಸೂರು ವಿಶ್ವವಿದ್ಯಾಲಯದ ಪ್ರತಿಷ್ಠಿತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಕಳವಳಕಾರಿ ಸಂಗತಿ. ಸಂಶೋಧಕರು ಮತ್ತು ವಿದ್ಯಾರ್ಥಿಗಳು ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿರುವುದು ದುರಂತ. ಹಾಗೆಯೇ ಸಂಶೋಧಕರನ್ನು ಅಗೌರವದಿಂದ ಕಾಣುತ್ತಿರುವ ಮತ್ತು ಮೂಲ ಸೌಕರ್ಯಗಳಿಂದ ವಂಚಿಸುತ್ತಿರುವ ಸಂಸ್ಥೆಯ ಅಧೀಕ್ಷರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಶೋಧಕರ ವೇದಿಕೆ ಅಧ್ಯಕ್ಷ ರಾಜೇಶ್ ಚಾಕ್ಕನಹಳ್ಳಿ ಆಗ್ರಹಿಸಿದರು.


ವಿದ್ಯಾರ್ಥಿಗಳಾದ ವರಹಳ್ಳಿ ಆನಂದ, ಸಂಜಯ್‌ಕುಮಾರ್, ಗೌತಮ್, ಅವಿನಾಶ್, ಸಿದ್ದನಾಗಪ್ಪ, ಬಿ.ಬಿ. ಸುರೇಶ್, ಅಭಿಷೇಕ್, ರಂಗಸ್ವಾಮಿ, ಕೆ.ಆರ್.ದಿಲೀಪ್, ಕಲ್ಲಹಳ್ಳಿ ಕುಮಾರ್, ರಾಜೇಶ್ ಶಿವ, ಪ್ರತಾಪ್, ನಟರಾಜ್ ಬೊಮ್ಮಲಪುರ ಇತರರು ಇದ್ದರು.