ಮೈಸೂರು: ಸರಳತೆ, ಸಜ್ಜನಿಕೆಗೆ ಹೆಸರಾದ, ಲಕ್ಷಾಂತರ ಜನರ ಬದುಕಿನ ಆಶಾಕಿರಣ, ದೇಶದ ಯಾವುದೇ ಮೂಲೆಯಲ್ಲೂ ಸಂಕಷ್ಟ ಎದುರಾಗುತ್ತಿದ್ದಂತೆ ಕೂಡಲೇ ನೆರವಿಗೆ ಬರುವ ಅಮ್ಮ ಎಂದರೆ ಅದು ನಮ್ಮ ಸುಧಮ್ಮ! ಅವರೇ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ.
ಡಾ.ಸುಧಾಮೂರ್ತಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಇದೀಗ ಸದ್ಯದಲ್ಲೇ ಮತ್ತೊಂದು ಗೌರವ ಅವರ ಮುಡಿಗೇರಲಿದೆ. ಮೈಸೂರು ವಿಶ್ವವಿದ್ಯಾಲಯಕ್ಕೀಗ 100ನೇ ವಾರ್ಷಿಕ ಘಟಿಕೋತ್ಸವದ ಸಂಭ್ರಮ. ಈ ಸುಸಂದರ್ಭದಲ್ಲಿ ಮೈಸೂರು ವಿವಿಯು ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.
ಅ.19ರ ಬೆಳಗ್ಗೆ 10.30ಕ್ಕೆ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿವಿ ಘಟಿಕೋತ್ಸವ ನಡೆಯಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಮಾಧ್ಯಮದ ಮೂಲಕ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದಿರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಘಟಿಕೋತ್ಸವದಲ್ಲಿ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು, ಸಂಶೋಧಕರು, ಸಾರ್ವಜನಿಕರು ನೇರವಾಗಿ ಭಾಗವಹಿಸಲು ನಿರ್ಬಂಧಿಸಲಾಗಿದೆ. ಮೈವಿವಿಯ ವೆಬ್ಸೈಟ್ https://uni-mysore.ac.in/ , ಫೇಸ್ಬುಕ್ ಮತ್ತು ಯುಟ್ಯೂಬ್ ಮೂಲಕ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.